ಮಂಗಳೂರು: ರೂಂಮೇಟ್ ಯುವತಿಯರಿಬ್ಬರ ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ ಆರೋಪದಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಲಶ ಮೂಲದ ನಿರೀಕ್ಷಾ ಎಂಬಾಕೆ ಬಂಧಿತೆ.
ಮಂಗಳೂರಿನ ಕುದ್ಯೋರಿಗುಡ್ಡೆಯ ಮನೆಯೊಂದರಲ್ಲಿ ಯುವತಿಯರು ಬಾಡಿಗೆಗಿದ್ದರು. ಇವರೆಲ್ಲರೂ ಮಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಂದರ್ಭ ಯುವತಿಯರಿಬ್ಬರು ಬಟ್ಟೆ ಬದಲಿಸುವ ವೀಡಿಯೋ ಮಾಡಿ ತನ್ನ ಸ್ನೇಹಿತ ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಅಭಿಷೇಕ್ ಆಚಾರ್ಯ ಎಂಬಾತನಿಗೆ ಕಳುಹಿಸಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಅಭಿಷೇಕ್ ಆಚಾರ್ಯ ನಿರೀಕ್ಷಾ ಹಾಗೂ ಮತ್ತೆ ಮೂವರ ಮೇಲೆ ಹನಿಟ್ರ್ಯಾಪ್ ಆರೋಪ ಮಾಡಿ ಕಳೆದ ಅಕ್ಟೋಬರ್ 9ರಂದು ಕಾರ್ಕಳದ ಲಾಡ್ಜ್ ಒಂದರಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ನಿರೀಕ್ಷಾ ತನ್ನ ರೂಮ್‌ನಲ್ಲಿದ್ದ ಇಬ್ಬರು ಯುವತಿಯರ ವಿಡಿಯೋ ಮಾಡಿ ವೈರಲ್ ಮಾಡಿದ್ದ ಬಗ್ಗೆಯೂ ಆತ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದ. ಅಲ್ಲದೆ ಸಾಯುವ ಮುನ್ನ truth group ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಅದರಲ್ಲಿ ಕೆಲವು ನಗ್ನ ವಿಡಿಯೋಗಳನ್ನು ಹರಿಬಿಟ್ಟಿದ್ದ.
ಅದರಲ್ಲಿ ಈ ಇಬ್ಬರ ಯುವತಿಯರ ವಿಡಿಯೋ ಕೂಡ ಇದ್ದ ಹಿನ್ನೆಲೆಯಲ್ಲಿ ಕದ್ರಿ ಠಾಣೆಯಲ್ಲಿ ಯುವತಿಯರು ದೂರು ದಾಖಲಿಸಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿರೀಕ್ಷಾಳನ್ನು ಬಂಧಿಸಿದ್ದಾರೆ.
