
ಮೈಸೂರು: ದಸರಾ ಉದ್ಘಾಟನೆ - ಬಾನು ಮುಸ್ತಾಕ್ ಅವರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
ಮೈಸೂರು: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರಕಾರ ಆಹ್ವಾನ ನೀಡಿರುವ 'ಬೂಕರ್ ಪ್ರಶಸ್ತಿ' ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೊರೆ ಹೋಗಿದ್ದಾರೆ.
ರಾಜ್ಯ ಸರಕಾರ ಈ ಬಾರಿಯ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದೆ. ಈ ಆಹ್ವಾನವನ್ನು ಹಿಂಪಡೆಯುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಯಾಗಬೇಕಿದೆ.ಮೈಸೂರು ದಸರಾ ಹಬ್ಬವನ್ನು ನಾಡಹಬ್ಬ ಎಂಬುದಾಗಿ ಕರೆಯಲಾಗುತ್ತಿದೆ. ಆದರೆ, ರಾಜ್ಯ ಸರಕಾರ ಬಾನು ಮುಷ್ತಾಕ್ ಅವರನ್ನು ದಸರಾ ಹಬ್ಬದ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನ ನೀಡಿದೆ. ಬಾನು ಮುಷ್ತಾಕ್ ಅವರು ಬೇರೊಂದು ಧರ್ಮಕ್ಕೆ ಸೇರಿದವರಾಗಿದ್ದಾರೆ. ಹಿಂದೂ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.
ದಸರಾ ಉದ್ಘಾಟನೆಯಲ್ಲಿ ಮುಖ್ಯ ಪಾತ್ರವು ಕೇವಲ ಔಪಚಾರಿಕವಲ್ಲ. ಬದಲಾಗಿ ಲಕ್ಷಾಂತರ ಭಕ್ತರು ಪವಿತ್ರವೆಂದು ಪರಿಗಣಿಸುವ ಹಿಂದೂ ಧಾರ್ಮಿಕ ಆಚರಣೆಗಳಲ್ಲೊಂದಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು ಚಾಮುಂಡೇಶ್ವರಿ ದೇವಿಯ ಗರ್ಭ ಗುಡಿಯ ಮುಂದೆ ಪವಿತ್ರ ದೀಪ ಹಚ್ಚಿ ಪೂಜಾ ಕೈಂಕರ್ಯಗಳಲ್ಲಿ ತೊಡಗಬೇಕಾಗುತ್ತದೆ. ಇದು ನಿಜವಾದ ಭಕ್ತಿ ತೋರ್ಪಡಿಸುವುದಾಗಿದೆ. ಹೀಗಾಗಿ ಸರಕಾರದ ನಿರ್ಧಾರವು ಹಿಂದೂ ಸಂಘಟನೆಗಳು, ಧಾರ್ಮಿಕ ಮುಖಂಡರು ಹಾಗೂ ಸಾಮಾನ್ಯ ಭಕ್ತರಿಗೆ ಕಳವಳಕ್ಕೆ ಕಾರಣವಾಗಿದೆ.ಧರ್ಮದ ಆಚರಣೆ ಎಂಬುದು ಸಂವಿಧಾನ ಬದ್ಧ ಹಕ್ಕಾಗಿದ್ದು, ಧಾರ್ಮಿಕ ಸಂಪ್ರದಾಯಗಳು ಮುಂದುವರೆಯಬೇಕು.
ಹೀಗಾಗಿ ರಾಜ್ಯ ಸರಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸಂವಿಧಾನದ ಪರಿಚ್ಛೇದ 25 ಮತ್ತು 26ರಲ್ಲಿ ಲಭ್ಯವಾಗಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆಯಾದಂತಾಗಿದೆ.
ದಸರಾ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದ್ದು, ಇದಕ್ಕೆ ರಾಜ ಮನೆತನದವರು ಸೇರಿದಂತೆ ಇತರರೊಂದಿಗೆ ಸಮಾಲೋಚನೆ ಮಾಡದೇ ಸರಕಾರ ಕೈಗೊಂಡಿರುವ ನಿರ್ಧಾರಕ್ಕೆ ತಡೆ ನೀಡಬೇಕು. ಸರಕಾರದ ಈ ಕ್ರಮದಿಂದ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲದೆ, ಶಾಂತಿ ಉಲ್ಲಂಘನೆ ಮತ್ತು ಕೋಮು ಗಲಭೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು ಇದನ್ನು ತಡೆಯಬೇಕಾಗಿದೆ. ಹೀಗಾಗಿ ಸರಕಾರದ ಕ್ರಮಕ್ಕೆ ಮಧ್ಯಂತರ ತಡೆ ನೀಡಬೇಕು. ಸರಕಾರದ ಕ್ರಮ ಸಾಹಿತ್ಯದಲ್ಲಿನ ಸಾಧನೆ ಮತ್ತು ಸಾಂಸ್ಕೃತಿಕವಾಗಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದರೂ, ಸಮಾಜದ ವಿವಿಧ ವರ್ಗಗಳಲ್ಲಿನ ಸಾಂಪ್ರದಾಯಿಕ ಪದ್ಧತಿಗಳಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಸರಕಾರದ ಕ್ರಮಕ್ಕೆ ತಡೆ ನೀಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.