
ಹಾಸನ: ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿ - ರಾಷ್ಟ್ರ ರಕ್ಷಣ ಸೇನೆ ಮನವಿ; ಸಂಪ್ರದಾಯಕ್ಕೆ ಲೋಪ ಬಾರದಂತೆ ದಸರಾ ಹಬ್ಬ ಉದ್ಘಾಟನೆ- ಬಾನು ಮುಷ್ತಾಕ್
ಹಾಸನ: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರಕಾರದ ಆಹ್ವಾನವನ್ನು ತಿರಸ್ಕರಿಸಬೇಕು ಎಂದು ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರಿಗೆ ರಾಷ್ಟ್ರ ರಕ್ಷಣ ಸೇನೆ ಬುಧವಾರ ಮನವಿ ಸಲ್ಲಿಸಿತು.
ಬಾನು ಮುಷ್ತಾಕ್ ಅವರ ನಿವಾಸಕ್ಕೆ ತೆರಳಿ ಖುದ್ದು ಮನವಿ ಸಲ್ಲಿಸಿದ ಸೇನೆಯ ರಾಜ್ಯ ಸಂಚಾಲಕ ಸುರೇಶ್ ಗೌಡ, ಜಿಲ್ಲಾ, ಸಂಚಾಲಕರಾದ ಧರ್ಮನಾಯಕ್, ರಾಜೇಶ್ ಕೆಂಚನಹಳ್ಳಿ ಮತ್ತಿತರರು, ನಿಮ್ಮ ಆಯ್ಕೆಗೆ ವಿವಿಧ ಕ್ಷೇತ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಸರಕಾರದ ಆಹ್ವಾನವನ್ನು ತಿರಸ್ಕರಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಿದರು.
ತಾವು ಹಿಂದೆ ಭುವನೇಶ್ವರಿ ತಾಯಿ ಬಗ್ಗೆ ವಿರೋಧ ಮಾಡಿ ಮಾತನಾಡಿದ್ದೀರಿ. ದಸರಾ ನಾಡ ಹಬ್ಬವಾದರೂ ಅದು ನಮ್ಮ ಹಿಂದೂ ಸಂಪ್ರದಾಯದ ಹಬ್ಬ. ಮೂರ್ತಿ ಪೂಜೆ ಇತ್ಯಾದಿ ನಮ್ಮ ಸಂಸ್ಕೃತಿ. ಸಂಪ್ರದಾಯ ಒಪ್ಪದ ನೀವು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಬಾನು ಮುಷ್ತಾಕ್, ಸಂಪ್ರದಾಯಕ್ಕೆ ಲೋಪ ಬಾರದಂತೆ ದಸರಾ ಹಬ್ಬವನ್ನು ಉದ್ಘಾಟನೆ ಮಾಡುವುದಾಗಿ ಹೇಳಿದರು.