
ಮಂಡ್ಯ: ಪ್ರಚೋದನಕಾರಿ ಭಾಷಣ: ಸಿ.ಟಿ ರವಿ ವಿರುದ್ಧ ಎಫ್‌ಐಆರ್
ಮಂಡ್ಯ:ಮದ್ದೂರಿನಲ್ಲಿ ನಿನ್ನೆ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮದ್ದೂರಿನಲ್ಲಿ ನಿನ್ನೆ ನಡೆದ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮದ ವೇದಿಕೆಯಲ್ಲಿ ಸಿಟಿ ರವಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ನೀಡಿದ ದೂರಿನನ್ವಯ ಸಿಟಿ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದತಾ ಭಾವನೆಗಳಿಗೆ ಭಾದಕವಾಗುವಂತೆ ವೈರತ್ವ, ದ್ವೇಷ ಉಂಟಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ನಾವು ಇಲ್ಲೇ ಇರುವವರು, ತೊಡೆ ತಟ್ಟೋ ಕೆಲಸ ಮಾಡಬೇಡಿ. ತೊಡೆ ಮುರೀತೀವಿ, ತಲೆಯೂ ತೆಗೀತೀವಿ, ಕಲ್ಲು ಹೊಡೆಯುವವರನ್ನು ಕಲ್ಲಿನ ಒಳಗಡೆ ಸಮಾಧಿ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ ಎಂಬ ಭಾಷಣ ಮಾಡಿದ್ದರು. ಇದು ಪ್ರಚೋದನಕಾರಿ ಭಾಷಣ ಎಂದು ಪೊಲೀಸರು ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.