ಉಡುಪಿ:ಲಿಂಗಾಯತ ಸ್ವತಂತ್ರ ಧರ್ಮ, ಅದು ಹಿಂದೂ- ಸನಾತನ ಧರ್ಮದ ಭಾಗವಲ್ಲ: ಡಾ. ಬಸವಲಿಂಗ ಪಟ್ಟದ್ದೇವರು

ಉಡುಪಿ:ಲಿಂಗಾಯತ ಸ್ವತಂತ್ರ ಧರ್ಮ, ಅದು ಹಿಂದೂ- ಸನಾತನ ಧರ್ಮದ ಭಾಗವಲ್ಲ: ಡಾ. ಬಸವಲಿಂಗ ಪಟ್ಟದ್ದೇವರು


ಉಡುಪಿ: ಲಿಂಗಾಯತ ಧರ್ಮ ಸನಾತನ ಧರ್ಮವನ್ನು ಒಡೆದು ಮಾಡಿದ ರಚನೆಯಲ್ಲ. ಅದು ಸಮಾಜದಲ್ಲಿನ ವರ್ಣ ಬೇಧ, ಜಾತಿ ಬೇಧ ವ್ಯವಸ್ಥೆಯ ವಿರುದ್ಧ ಹುಟ್ಟಿಕೊಂಡ ಧರ್ಮ. ಲಿಂಗಾಯತ ಧರ್ಮವು ಹಿಂದೂ, ಸನಾತನ ಧರ್ಮದ ಭಾಗವಲ್ಲ, ಇದೊಂದು ಸ್ವತಂತ್ರ ಧರ್ಮ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಉಡುಪಿ ಪುರಭವನ (ಟೌನ್‌ಹಾಲ್)ದಲ್ಲಿ ಗುರುವಾರ ಬಸವ ಸಂಸ್ಕೃತಿ ಅಭಿಯಾನ ಉಡುಪಿ ಅಂಗವಾಗಿ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ನಡೆದ ವಚನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಲಿಂಗಾಯತ ಎನ್ನುವುದು ಜಾತಿಯಲ್ಲ. ಅದೊಂದು ಪರಿಪೂರ್ಣ ಧರ್ಮ. ಧರ್ಮ ಬೇರೆ, ಜಾತಿಯೇ ಬೇರೆ. ಜಾತಿ ಕತ್ತಲಿನಂತೆ, ಧರ್ಮ ಬೆಳಕಿನಂತೆ. ಜಾತಿಯ ಕತ್ತಲು ದೂರವಾಗಲು ಧರ್ಮದ ಬೆಳಕಿನ ಅವಶ್ಯಕತೆ ಇದೆ ಎಂದರು.

ಹಂದಿಗುಂದ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಸಿಖ್ಖ್, ಜೈನ್ ಧರ್ಮ ಹಾಗೂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಧರ್ಮದಂತೆಯೇ ಲಿಂಗಾಯತ ಧರ್ಮಕ್ಕೆ ಸಂವಿಧಾನ ಬದ್ಧ ಮಾನ್ಯತೆಗೆ ಕೇಳುತ್ತಿದ್ದೇವೆ. ಇದು ಹೋರಾಟವಲ್ಲ. ನಮ್ಮ ಹಕ್ಕು. ಲಿಂಗಾಯತವು ಹಿಂದೂ ಅಥವಾ ಸನಾತನ ಧರ್ಮದ ಭಾಗವಲ್ಲ. ಲಿಂಗಾಯತ ಸ್ವತಂತ್ರ ಧರ್ಮ. ಬಸವಣ್ಣರೇ ಧರ್ಮಗುರು. ವಚನ ಸಾಹಿತ್ಯವೇ ಧರ್ಮ ಗ್ರಂಥ, ಬಸವಣ್ಣ ಕೊಟ್ಟಿರುವ ಬಸವ ಧರ್ಮ/ಲಿಂಗಾಯತ ಧರ್ಮ. ಇದು ಯಾವುದೇ ಧರ್ಮದ ಭಾಗವಲ್ಲ ಎಂದು ಸ್ಪಷ್ಟಪಡಿಸಿದರು.

ಹುಲಸೂರು ಶ್ರೀಮಠದ ಶ್ರೀಶಿವನಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಧಾರವಾಡ ನವಲಗುಂದ ಗವಿಮಠದ ಶ್ರೀಬಸವಲಿಂಗ ಸ್ವಾಮೀಜಿ, ಕಲಬುರ್ಗಿ ಷಣ್ಮುಖ ಶಿವಯೋಗಿಗಳ ಮಠದ ಶ್ರೀವೀರಸಿದ್ಧ ದೇವರು, ರಾಯಚೂರು ಶ್ರೀವೀರಭದ್ರ ಶಾಸ್ತ್ರಿಗಳು, ಬೆಳಗಾವಿ ಶ್ರೀ ಶಿವಬಸವ ದೇವರು, ಬಸವಕಲ್ಯಾಣದ ಶ್ರೀಬಸವರಾಜ ದೇವರು, ಮಮ್ಮಿಗಟ್ಟಿಯ ಬಸವನಂದ ಸ್ವಾಮೀಜಿ ಭಾಗವಹಿಸಿದರು. 

ಬೆಳಗಾವಿ ಸೆಗುಣಿಸೆಯ ಶ್ರೀ. ಡಾ. ಮಹಾಂತ ಪ್ರಭು ಸ್ವಾಮೀಜಿ ಸಂವಾದದ ಸಮನ್ವಯಕರಾಗಿ ಸಹಕರಿಸಿದರು. 

ಅಖಿಲ ಭಾರತ ವೀರಶೈವ ಮಹಾಸಭಾ ಉಡುಪಿ ಜಿಲ್ಲೆ ಗೌರವಾಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್, ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಅಧ್ಯಕ್ಷ ನಿರಂಜನ ಚೋಳಯ್ಯ ಉಪಸ್ಥಿತರಿದ್ದರು. 

ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್, ದಸಂಸ ಮುಖಂಡ ಸುಂದರ್ ಮಾಸ್ಟರ್, ಬಿಲ್ಲವ ಮುಖಂಡೆ ಗೀತಾಂಜಲಿ ಸುವರ್ಣ ಸಹಿತ ಅನೇಕರು ಸಂವಾದ ನಡೆಸಿದರು.

Ads on article

Advertise in articles 1

advertising articles 2

Advertise under the article