
ಉಡುಪಿ: ರೈತರಿಂದ ಪ್ರತಿಭಟನೆ - ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಉಡುಪಿ : ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.ಕಳೆದ ಕೆಲವು ಸಮಯದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಈ ಬನಾಗದ ರೈತರು ಇಂದು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಿದರು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿದರು.
ಹಸಿರು ಶಾಲು ಹಾಕಿ ದೂರದ ಬೈಂದೂರಿನಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ನೂರಾರು ರೈತರು ,ಹಸಿರು ಶಾಲು ಬೀಸುತ್ತಾ ಮೆರವಣಿಗೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಲಗಿ ಆಕ್ರೋಶ ಹೊರ ಹಾಕಿದರು.ಭತ್ತದ ಪೈರನ್ನು ಹಡಿ ಮಂಚಕ್ಕೆ ಹೊಡೆದು ಸಿಟ್ಟನ್ನುಹೊರಹಾಕಿದರು.
ಪ್ರತಿಭಟನ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ , ಹಳ್ಳಿಗಳನ್ನು, ಅರಣ್ಯ ಪ್ರದೇಶಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ.
ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡುವವರೆಗೂ ನಾವು ಯವುದೇ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಭಾವಹಿಸುವುದಿಲ್ಲ.ನಮ್ಮ ಬೇಡಿಕೆ ಈಡೇರುವವರೆಗೆ ಬೈಂದೂರಿನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದೂ ಹೇಳಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಅರುಣ್ ಕುಮಾರ್, ವೀರಭದ್ರ ಗಾಣಿಗ, ಕೃಷ್ಣ ದೇವಾಡಿಗ, ಮ್ಯಾಥ್ಯು, ನಾಗರಾಜ್ ಮರಾಠೆ ಮತ್ತಿತರರು ಉಪಸ್ಥಿತರಿದ್ದರು.
ರೈತರ ಆಗ್ರಹ - ವಿರೋಧಗಳೇನು?
5 ವರ್ಷಗಳ ಹಿಂದೆ ಬೈಂದೂರು ಪುರಸಭೆಯನ್ನು ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈವರೆಗೂ ಚುನಾವಣೆ ನಡೆದಿಲ್ಲ. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಲ್ಲದೆ ಬೈಂದೂರು ಪಟ್ಟಣ ವ್ಯಾಪ್ತಿ ಬಿಟ್ಟು ಗ್ರಾಮಾಂತರ ಪ್ರದೇಶಗಳು, ಅರಣ್ಯ ಪ್ರದೇಶಗಳನ್ನೂ ಸೇರಿಸಿಕೊಂಡಿರುವುದರಿಂದ ಗ್ರಾಮಾಂತರ ಪ್ರದೇಶದ ರೈತರು ನಾನಾ ಇಲಾಖೆಗಳಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗಿದ್ದಾರೆ.ಬಗ್ಗೆ ಸಂಘ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಸರಕಾರದ ಪ್ರಸ್ತಾವಿತ ಯೋಜನೆಯಲ್ಲಿ 20 ವಾರ್ಡ್‌ಗಳನ್ನು ರಚಿಸಲಾಗಿದ್ದು, ಅದರಲ್ಲಿಗ್ರಾಮಾಂತರ ಪ್ರದೇಶವನ್ನು ಸೇರಿಸಿಕೊಂಡ 9 ವಾರ್ಡ್‌ಗಳನ್ನು ರಚಿಸಲಾಗಿದೆ.
ಈ ನಡುವೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಪಟ್ಟಣ ಪಂಚಾಯಿತಿಯ ಸರ್ವೆ ನಡೆಸಿ 11 ವಾರ್ಡ್‌ಗಳನ್ನು ರಚಿಸಿ ಸರಕಾರದ ಅನುಮೋದನೆಗೆ ಸಲ್ಲಿಸಿತ್ತು. ಆದರೆ ಸರಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ಈ ಪ್ರತಿಭಟನೆ ನಡೆಸಿದ್ದೇವೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.