
ಉಡುಪಿ: ಭಾರೀ ಟ್ರೋಲ್ ಗೆ ಒಳಗಾಗಿದ್ದ ಇಂದ್ರಾಳಿ ರೈಲ್ವೆ ಸೇತುವೆ ಉದ್ಘಾಟನೆ
ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆಯ ಬಹುನಿರೀಕ್ಷಿತ ಕಾಮಗಾರಿ ಕೊನೆಗೂ ಅಂತಿಮಗೊಂಡಿದ್ದು ರೈಲ್ವೆ ಸಚಿವ ವಿ. ಸೋಮಣ್ಣ ಭಾನುವಾರ ಉದ್ಘಾಟನೆ ನೆರವೇರಿಸಿದರು.ಸಂಸದ ಕೋಟ ಶ್ರೀನಿವಾಸ್ ಪೂಜಾರಿ ,ಉಡುಪಿ ಶಾಸಕ ಯಶ್ಪಾಲ್ ಸುವರ್ಣ ,ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗಂಟೆಹೊಳೆ ,ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತಿತರ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದರ ಉದ್ಘಾಟನೆಯೊಂದಿಗೆ, ಉಡುಪಿಯ ಬಹುನಿರೀಕ್ಷಿತ ಯೋಜನೆಯೊಂದು ಬಹುತೇಕ ಪೂರ್ಣಗೊಂಡಂತಾಗಿದೆ. ಈ ಯೋಜನೆಯ ಕಾಮಗಾರಿಯನ್ನು ತ್ವರಿತಗೊಳಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಸಾರ್ವಜನಿಕರು ಮತ್ತು ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆ ಮೂಲಕ ಸಾಕಷ್ಟು ಒತ್ತಡ ಹೇರಿದ್ದವು. ಕಳೆದ ಎಂಟು ವರ್ಷಗಳಿಂದ ಯೋಜನೆ ನೆನೆಗುದಿಗೆ ಬಿದ್ದ ಪರಿಣಾಮ ಸಾಕಷ್ಟು ಅಪಘಾತಗಳು ಸಂಭವಿಸಿದ್ದವು. ಉಡುಪಿ ಮಣಿಪಾಲ ಮಾತ್ರವಲ್ಲದೆ ಹೊರಭಾಗದ ವಾಹನ ಸವಾರರು ಕೂಡ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ರೀತಿಯಲ್ಲೇ ಇಂದ್ರಾಳಿ ರೈಲ್ವೆ ಸೇತುವೆ ಕೂಡ ಟ್ರೋಲ್ ಗೆ ಒಳಗಾಗಿತ್ತು. ಇದೀಗ ಉದ್ಘಾಟನೆ ಕಾರ್ಯ ನೆರವೇರಿದ್ದು ನವರಾತ್ರಿ ಹಬ್ಬದ ಸಂದರ್ಭ ವಾಹನ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಮುಕ್ತಗೊಳ್ಳುವ ನಿರೀಕ್ಷೆಯಿದೆ.
ಸೇತುವೆಯ ತಾಂತ್ರಿಕ ವೈಶಿಷ್ಟ್ಯಗಳು:
• ಉದ್ದ ಸುಮಾರು 58 ಮೀಟರ್, ಸಿಂಗಲ್ ಸ್ಪಾನ್ ಬೋ-ಸ್ಟ್ರಿಂಗ್ ಗರ್ಡರ್ ವಿನ್ಯಾಸ.
• ಅಗಲ 12.5 ಮೀಟರ್, ಎರಡೂ ಬದಿಯಲ್ಲಿ 1.5 ಮೀಟರ್ ಪಾದಚಾರಿಗಳ ದಾರಿ.
• ನಿರ್ಮಾಣಕ್ಕೆ ಬಳಸಿರುವ ಉಕ್ಕು: ಸುಮಾರು 420 ಟನ್ ಪೂರ್ವಸಿದ್ಧ ಗರ್ಡರ್ಗಳು.
ಈ ಬ್ರಿಡ್ಜ್ ಉದ್ಘಾಟನೆಯಿಂದ ಉಡುಪಿ–ಮಣಿಪಾಲ ಮಾರ್ಗದ ಸಂಚಾರ ದಟ್ಟಣೆ ಹಾಗೂ ಅಪಘಾತ ಭೀತಿ ಕಡಿಮೆಯಾಗಲಿದೆ. ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಸಂಚರಿಸುವವರಿಗೆ ಇದರಿಂದ ದೊಡ್ಡ ಅನುಕೂಲವಾಗಲಿದೆ.