
ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆ: ರಾಜಕೀಯ ಲಾಭ ಸಿಗುವುದಿಲ್ಲ- ಸಿಎಂ ಸಿದ್ದರಾಮಯ್ಯ
ಮೈಸೂರು: ಬಿಜೆಪಿಯವರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿ ರಾಜಕೀಯವಾಗಿ ಯಾತ್ರೆ ಕೈಗೊಂಡಿದೆ. ಅವರಿಗೆ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸಿಗುವುದಿಲ್ಲ. ಏಕೆಂದರೆ ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಢೋಂಗಿತನ ಎಂದರು.
ಬಿಜೆಪಿ ದಸರಾ ಹಬ್ಬದಲ್ಲೂ ರಾಜಕಾರಣ ಮಾಡುತ್ತಿದ್ದಾರೆ
ಮೈಸೂರಿಗೂ ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾತನಾಡಿ ,ಬಿಜೆಪಿಯವರು ಹಿಂದುತ್ವ ಗಟ್ಟಿಯಾಗುತ್ತದೆ, ಹಿಂದೂಗಳೆಲ್ಲ ಒಟ್ಟಾಗುತ್ತಾರೆ ಎಂದು ತಿಳಿದಿದ್ದಾರೆ. ನಾನೂ ಕೂಡ ಹಿಂದೂವೇ. ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ಲವೇ? ಎಂದು ಪ್ರಶ್ನಿಸಿದರು. ಹಿಂದುಗಳೆಂದರೆ ರಾಜಕೀಯ, ಅಪಪ್ರಚಾರ ಮಾಡುವುದಲ್ಲ, ಸುಳ್ಳು ಹೇಳುವುದಲ್ಲ. ಯಾರೇ ಆದರೂ ಮನಷ್ಯತ್ವವಿರಬೇಕು ಎಂದರು. ಬಿಜೆಪಿ ದಸರಾ ಹಬ್ಬದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು ಬಿಟ್ಟು ಬೇರೇನಾದರೂ ಅವರಿಗೆ ಬರುತ್ತದೆಯೇ ಎಂದರು.
ಬಾನು ಮುಷ್ತಾಕ್ ಅವರಿಗೆ ಉದ್ಘಾಟನೆಗೆ ಆಹ್ವಾನ
ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರಕಿದ್ದು, ಎಷ್ಟು ಜನಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದ ಮುಖ್ಯಮಂತ್ರಿಗಳು, ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಅವಕಾಶ ನೀಡಲಾಗಿದೆ ಎಂದವರು.
ದಸರಾ ಮೇಲೆ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ
ಯಾವುದೇ ದಸರಾ ಹಬ್ಬದ ಮೇಲೆ ಈ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಮುಖ್ಯಮಂತ್ರಿಗಳು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಇರಬಹುದು. ದಸರಾ ಹಬ್ಬ ನಾಡ ಹಬ್ಬವಲ್ಲವೇ? ನಾಡ ಹಬ್ಬ ಎಂದರೆ ಎಲ್ಲರೂ ಸೇರಿ ಮಾಡುವುದು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ ಎಂದರು.
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ವಿಷಯ ಇರುವುದು ಚಾಮುಂಡಿ ಬೆಟ್ಟದ್ದಲ್ಲ, ದಸರಾ ಹಬ್ಬದ್ದು ಎಂದರು. ಸಚಿವರಾದ ವೆಂಕಟೇಶ್ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.