ಉಡುಪಿ: ಸೆ. 7 ಮತ್ತು 13ರಂದು ಓಸ್ಕರ್ ಫರ್ನಾಂಡಿಸ್‌ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ‌

ಉಡುಪಿ: ಸೆ. 7 ಮತ್ತು 13ರಂದು ಓಸ್ಕರ್ ಫರ್ನಾಂಡಿಸ್‌ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ‌

 


ಉಡುಪಿ: ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ ಓಸ್ಕರ್ ಫರ್ನಾಂಡಿಸ್‌ ಅವರ ಸ್ಮರಣಾರ್ಥವಾಗಿ ಇದೇ ಸೆ.7ರಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಹಾಗೂ ಸೆ.13ರಂದು ಬನ್ನಂಜೆಯ‌ ನಾರಾಯಣಗುರು ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಆಸ್ಕರ್ ಫೆರ್ನಾಂಡಿಸ್ ಅಭಿಮಾನಿಗಳ ಸಮಿತಿಯ‌ ಅಧ್ಯಕ್ಷ ಯತೀಶ್ ಕರ್ಕೇರ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.7ರಂದು ಕಾಂಗ್ರೆಸ್ ಭವನದಲ್ಲಿ 1ನೇ ತರಗತಿಯಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ “ಸ್ವಾತಂತ್ರ್ಯ ಹೋರಾಟಗಾರರು” ಎಂಬ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ, 5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, ಸ್ವಾತಂತ್ರ ಹೋರಾಟಗಾರರು ವಿಷಯದಲ್ಲಿ ಚಿತ್ರಕಲೆ ಹಾಗೂ ದೇಶ ಭಕ್ತಿಗೀತೆ (ಸಮೂಹ) ಸ್ಪರ್ಧೆಯನ್ನು ಆಯೋಜಿಸಲಾಗಿದೆ. 8ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜಕೀಯ ವಿಷಯದಲ್ಲಿ ಕೊಲೆಜ್ ಆರ್ಟ್, ಭಾರತ ಸಂವಿಧಾನ ವಿಷಯದಲ್ಲಿ ಪ್ರಬಂಧ ಮತ್ತು ದೇಶ ಭಕ್ತಿಗೀತೆ (ಸಮೂಹ) ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.13ರಂದು ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ 1ನೇ ತರಗತಿಯಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ವಿಷಯದಲ್ಲಿ ಫ್ಯಾನ್ಸಿ ಡ್ರೆಸ್, ಪಿಯುಸಿ ವಿದ್ಯಾರ್ಥಿನಿಯರಿಗೆ ರಂಗೋಲಿ, ಜಡೆ ಕಟ್ಟುವುದು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಸ್ಪರ್ಧೆಗೆ ಗರಿಷ್ಠ ಮಿತಿ ಇರುವುದಿಲ್ಲ. ಎಷ್ಟು ವಿದ್ಯಾರ್ಥಿಗಳು ಬೇಕಾದರೂ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ಶಾಲೆ ಮುಖ್ಯಅಧ್ಯಾಪಕರಿಂದ ಪತ್ರ ಅಥವಾ ಗುರುತುಪತ್ರ ತರಬೇಕು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 99018 66998 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾಬಲ ಕುಂದರ್, ಜ್ಯೋತಿ ಹೆಬ್ಬಾರ್, ಉಪೇಂದ್ರ ಮೆಂಡನ್, ಮುರಳಿ ಶೆಟ್ಟಿ, ಮನೋಜ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article