
ಉಡುಪಿ: ಜಿಲ್ಲೆಯಲ್ಲಿ ಒಟ್ಟು 3.19 ಲಕ್ಷ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಡಿಸಿ ಸ್ವರೂಪ ಟಿ.ಕೆ
ಉಡುಪಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 3.19 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ವೀಡಿಯೋ ಕಾನ್ಸರೆನ್ಸ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಗತ್ಯವಿರುವ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಉಡುಪಿ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಸುಮಾರು 1.05 ಲಕ್ಷ ಹಾಗೂ ಗ್ರಾಮೀಣ ಭಾಗದಲ್ಲಿ 2.14 ಲಕ್ಷ ಕುಟುಂಬ ಸೇರಿದಂತೆ ಒಟ್ಟು ಸುಮಾರು 3.19 ಲಕ್ಷ ಕುಟುಂಬಗಳಿದ್ದು ಈ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಬೇಕಾಗಿದೆ. ಸಮೀಕ್ಷೆಯ ವೇಳೆ ಯಾವುದೇ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದವರು ಸೂಚನೆ ನೀಡಿದರಲ್ಲದೇ, ವ್ಯವಸ್ಥಿತ ಸಮೀಕ್ಷೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಸಾಮಾನ್ಯವಾಗಿ ಜಿಲ್ಲೆಯ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ, ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಮನೆಗಳಿಗೆ ಜಿಯೋ ಟ್ಯಾಗಿಂಗ್‌ಗಾಗಿ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಸೆಪ್ಟೆಂಬರ್ 10ರ ಒಳಗೆ ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯವನ್ನು ಮೆಸ್ಕಾಂ ಇಲಾಖೆ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು.