
ಕಟಪಾಡಿ: ಬಾವಿಗೆ ಬಿದ್ದ ಚಿರತೆ ಮರಿ- 2 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
10/09/2025 02:37 AM
ಕಟಪಾಡಿ: ಮಣಿಪುರ ಗ್ರಾಮದ ಸಿಎಸ್‌ಐ ಚರ್ಚ್ ಬಳಿಯ ಜೇಕಬ್ ಸಿಕ್ವೇರ ಅವರ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಮಂಗಳವಾರ ಕಂಡುಬಂದಿದ್ದು ಅದನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಬಿಟ್ಟಿದೆ.
ಜೇಕಬ್ ಸಿಕ್ವೇರ ಅವರ ತೋಟದ ಬಾವಿಯ ನೀರಿನ ಪಂಪ್ ಚಾಲೂ ಆಗದೆ ಇದ್ದು, ಪರಿಶೀಲಿಸಿದಾಗ ಚಿರತೆಯು ಬಾವಿಯಲ್ಲಿದ್ದ ಪಂಪ್‌ನ ವಯರನ್ನು ತುಂಡು ಮಾಡಿರುವುದು ಗಮನಕ್ಕೆ ಬಂತು.ಸುಮಾರು 2ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯಲಾಯಿತು.ಆರ್‌ಎಫ್‌ಒ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.