ಉಡುಪಿ: ಇಂದ್ರಾಳಿ ಮೇಲ್ಸೇತುವೆ ಸೆಪ್ಟೆಂಬರ್ 22ಕ್ಕೆ ವಾಹನ ಸಂಚಾರಕ್ಕೆ ಮುಕ್ತ - ಸಂಸದ ಕೋಟ

ಉಡುಪಿ: ಇಂದ್ರಾಳಿ ಮೇಲ್ಸೇತುವೆ ಸೆಪ್ಟೆಂಬರ್ 22ಕ್ಕೆ ವಾಹನ ಸಂಚಾರಕ್ಕೆ ಮುಕ್ತ - ಸಂಸದ ಕೋಟ

 

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಇಂದ್ರಾಳಿ ಮೇಲ್ಸೇತುವೆ ಹಾಗೂ ಕೆಳ ಪರ್ಕಳ ರಸ್ತೆ ಕಾಮಗಾರಿ ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು ಸೆಪ್ಟೆಂಬರ್ 22 ರಂದು ವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು.  ಮಳೆಯ ಕಾರಣದಿಂದ  ಮುಂದೂಡಲ್ಪಟ್ಟಿದ್ದ 

ಕೆಳ ಪರ್ಕಳ ರಸ್ತೆ ದುರಸ್ತಿ ಕಾಮಗಾರಿ ಸೋಮವಾರದಿಂದಲೇ ಆರಂಭಗೊಳ್ಳಲಿದ್ದು, ಒಂದು ವಾರದ ಕಾಲ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ರಾಷ್ಟೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ನವರಾತ್ರಿಯ ಮೊದಲ ದಿನದಂದು ಲೋಕಾರ್ಪಣೆಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.  ಕೆಳ ಪರ್ಕಳ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವಾದ ಹಿನ್ನೆಲೆಯಲ್ಲಿ ಸಂಸದರ ವಿಶೇಷ ಮುತುವರ್ಜಿಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿಶೇಷ ಅನುದಾನ ಒದಗಿಸಿದ್ದು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಒಂದು ವಾರದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮಳೆಯ ಕಾರಣದಿಂದ ಕೆಳ ಪರ್ಕಳ ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು, ಸಾರ್ವಜನಿಕರು ಸಮಸ್ಯೆ ಎದುರಿಸಿದ ಬಗ್ಗೆ ವಿಷಾದಪಡಿಸುತ್ತಾ, ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರು, ವಾಹನ ಸವಾರರು ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹರಿರಾಮ್ ಶಂಕರ್, ಹೆಚ್ಚುವರಿ ಅಧೀಕ್ಷಕರಾದ ಸುಧಾಕರ ನಾಯ್ಕ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್  ಮಂಜುನಾಥ ನಾಯಕ್,  ನಗರಸಭಾ ಸದಸ್ಯರಾದ ಶ್ರೀಮತಿ ಸುಮಿತ್ರಾ ನಾಯಕ್, ಗಿರೀಶ್ ಅಂಚನ್,  ಅಶೋಕ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article