
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ಸೆ. 22 – ಅ 2 ರವರೆಗೆ 'ಉಡುಪಿ – ಉಚ್ಚಿಲ ದಸರಾ-2025'
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 4ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ “ಉಡುಪಿ-ಉಚ್ಚಿಲ ದಸರಾ-2025” ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2 ರವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರ ನಾಡೋಜಾ ಡಾ. ಜಿ ಶಂಕರ್ ಮಾಹಿತಿ ನೀಡಿದರು.
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳೆದ 3 ವರ್ಷಗಳಲ್ಲಿ ಆಯೋಜನೆ ಮಾಡಲಾದ ದಸರಾ ಮಹೋತ್ಸವವು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಸೆ. 22ರ ಬೆಳಿಗ್ಗೆ ಗಂಟೆ 9 ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು.
ಶರನ್ನವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಪ್ರತೀದಿನ ಬೆಳಿಗ್ಗೆ ಗಂಟೆ 9 ರಿಂದ ಮಧ್ಯಾಹ್ನ 12 ರವರೆಗೆ ಚಂಡಿಕಾಹೋಮ, ಮಧ್ಯಾಹ್ನ ಗಂಟೆ 12 ರಿಂದ 3 ಗಂಟೆಯವರೆಗೆ ಅನ್ನಸಂತರ್ಪಣೆ, ಸಂಜೆ ಗಂಟೆ 6.30ರಿಂದ ಭಕ್ತರಿಗೆ ಪ್ರಸಾದ ವಿತರಣೆ, ಗಂಟೆ 5.30ರಿಂದ 6.15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.ಪ್ರತೀದಿನ ಬೆಳಿಗ್ಗೆ ಗಂಟೆ 10 ರಿಂದ ಭಜನಾ ಕಾರ್ಯಕ್ರಮ, ಪ್ರತೀದಿನ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತೀದಿನ ರಾತ್ರಿ ಗಂಟೆ 8.30 ರಿಂದ ಕಲ್ಪೋಕ್ತ ಪೂಜೆ, ಅ.2, ಗುರುವಾರ ವಿಜಯದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ ಎಂದರು.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳೆಯರ ಹುಲಿಕುಣಿತ ಸ್ಪರ್ಧೆ, ದೇಹದಾಢ್ಯ ಸ್ಪರ್ಧೆ, ನೃತ್ಯ ಸ್ಪರ್ಧೆ, ನಾಟಕ, ಸುಗಮ ಸಂಗೀತ, ಯಕ್ಷಗಾನಗಳು ಜರಗಲಿದೆ.
ದಸರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಂದರ್ಶನ ಮಾಡಲು ಮಂಗಳೂರು ಕಡೆಯಿಂದ ಬರುವ ಭಕ್ತಾದಿಗಳ ವಾಹನಗಳು ಸರಸ್ವತಿ ಶಾಲೆಯ ಮೈದಾನದಲ್ಲಿ ಹಾಗೂ ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮಿ ಇಂಗ್ಲೀಷ್ ಮೀಡಿಯಂ ಶಾಲೆಯ ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರಿಗೆ ಸುಲಭವಾಗಿ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲು ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ಕೆ ಸಹಕರಿಸಲು ದಿನಂಪ್ರತಿ 1,500 ಸ್ವಯಂಸೇವಕರು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಹಿಳಾ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ.
ಸೆ. 21ರಂದು ಸಂಜೆ ಗಂಟೆ 6.30ಕ್ಕೆ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂಕಾರದ ಉಧ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು.ದಸರಾ ಮಹೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ವಿವಿಧ ಪ್ರದರ್ಶನಗಳು ಇರಲಿವೆ.
ಕಾಪು ಬೀಚ್ ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಸುವರ್ಣ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉಷಾ ರಾಣಿ ಮಂಗಳೂರು, ಮನೋಜ್ ಕಾಂಚನ್, ಸುಜಿತ್ ಸಾಲ್ಯಾನ್, ಸತೀಶ್ ಕಾಂಚನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಷ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.