
ಮಂಗಳೂರು: ರಸ್ತೆ ಹೊಂಡಕ್ಕೆ ಬಿದ್ದ ದ್ವಿಚಕ್ರ ಸವಾರೆಯ ಮೇಲೆಯೇ ಹರಿದ ಕ್ಯಾಂಟರ್ ಲಾರಿ- ಯುವತಿ ಮೃತ್ಯು ,ವ್ಯಾಪಕ ಆಕ್ರೋಶ
ಮಂಗಳೂರು: ರಸ್ತೆ ಹೊಂಡಕ್ಕೆ ಬಿದ್ದ ದ್ವಿಚಕ್ರ ಸವಾರೆಯ ಮೇಲೆಯೇ ಕ್ಯಾಂಟರ್ ಲಾರಿ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರು ರಾಯಲ್ ಓಕ್ ಶೋರೂಂ ಮುಂಭಾಗ ಮಂಗಳವಾರ ಬೆಳಗ್ಗೆ ನಡೆದಿದೆ.
ಉಡುಪಿಯ ಪರ್ಕಳ ಮೂಲದ ಮಾಧವಿ ಎಂಬ ಮಹಿಳೆ ಮೃತಪಟ್ಟವರು.
ಎ.ಜೆ. ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿಯವರು ಕರ್ತವ್ಯಕ್ಕೆ ಹಾಜರಾಗಲು ತಮ್ಮ ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು. ಕೂಳೂರು ಫ್ಲೈ ಓವರ್ ಬ್ರಿಡ್ಜ್ ಇಳಿಯುತ್ತಿದ್ದಂತೆ ಸ್ಕೂಟರ್ ರಸ್ತೆ ಹೊಂಡಕ್ಕೆ ಬಿದ್ದು ಮಾಧವಿಯವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಮಾಧವಿಯವರ ಮೇಲೆಯೇ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎನ್‌ಎಚ್ 66 ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಟ್ಟು ಸಂಚರಿಸಬೇಕಾಗಿದೆ. ಇತ್ತೀಚೆಗೆ ಎನ್‌ಎಚ್ ನಾಮಕೆವಾಸ್ತೆ ರಸ್ತೆಗೆ ತೇಪೆ ಹಚ್ಚುವ ಕಾರ್ಯ ನಡೆಸಿದೆ. ಆದರೂ ಹೊಂಡ ಗುಂಡಿಗಳು ಇನ್ನೂ ಹಾಗೆಯೇ ಇದೆ. ಇದೀಗ ಮಹಿಳೆಯೋರ್ವರನ್ನು ರಸ್ತೆ ಗುಂಡಿ ಬಲಿ ಪಡೆದಿದ್ದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.