ಮುಂಬಯಿ:ಕರಾವಳಿ ಅಭಿವೃದ್ಧಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪೂರಕ ಕೆಲಸ ಮಾಡುತ್ತಿದೆ- ಸ್ಪೀಕರ್ ಯು.ಟಿ.ಖಾದರ್

ಮುಂಬಯಿ:ಕರಾವಳಿ ಅಭಿವೃದ್ಧಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪೂರಕ ಕೆಲಸ ಮಾಡುತ್ತಿದೆ- ಸ್ಪೀಕರ್ ಯು.ಟಿ.ಖಾದರ್

 



ಮುಂಬಯಿ: ಕಳೆದ 25 ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಾಮಾಜಿಕವಾಗಿ, ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಗಳಲ್ಲಿ ಪರಿಸರವನ್ನು ಉಳಿಸುವ ಮುಖಾಂತರ ಸಮಿತಿಯು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕರ್ನಾಟಕ ಸರಕಾರದ ಸ್ವೀಕರ್ ಯು.ಟಿ.ಖಾದರ್ ನುಡಿದರು.

ಸೆ.5 ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ಸಂಸ್ಥಾಪನಾ ದಿನ ಮತ್ತು ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ ಸಮಾರಂಭವು ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರಾಂಡ್‌ನಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭಕ್ಕೆ ಚಾಲನೆಯಿತ್ತು ಮಾತನಾಡಿದ ಅವರು ವಿಶ್ವಮಟ್ಟದ ಸಂಸ್ಕೃತಿಯನ್ನು ನಾವು ಭಾರತ ದೇಶದಲ್ಲಿ ಮಾತ್ರ ಕಾಣಬಹುದು, ಭಾರತದ ಸಂಸ್ಕೃತಿಯನ್ನು ಕರ್ನಾಟಕದಲ್ಲಿ, ಕರ್ನಾಟಕದ ಸಂಸ್ಕೃತಿಯನ್ನು ದಕ್ಷಿಣ ಕನ್ನಡ, ತುಳುನಾಡಲ್ಲಿ, ತುಳುನಾಡಿನ ಸಂಸ್ಕೃತಿಯನ್ನು ನಾವು ಮುಂಬಯಿಯ ಇಂತಹ ಕಾರ್ಯಕ್ರಮಗಳಲ್ಲಿ ಕಾಣಬಹುದು ಎಂದರು. ಸಮಿತಿಯ ಕಳೆದ 25 ವರ್ಷಗಳಿಂದ ಪರಿಸರಕ್ಕೆ ಸಂಬಂಧಿಸಿದ ಪ್ರಯಾಣಕ್ಕೆ ಸಾಕ್ಷಿಯಾಗಿ ನಾನಿಲ್ಲಿ ಬಂದು ನಿಂತಿರುವೆ. ಸಮಿತಿಯು ಪ್ರದೇಶದ ಪರಿಸರ ಹಾಳಾಗದ ರೀತಿಯಲ್ಲಿ ಭವಿಷ್ಯದ ನಮ್ಮ ಜನರಿಗೆ ಬೇಕಾದ ಅಭಿವೃದ್ಧಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುವುದರ ಮೂಲಕ ನಮ್ಮ ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ ಕ್ರೀಯಾಶೀಲವಾಗಿದೆ. ಮುಂದಿನ ನೂರು ವರ್ಷಗಳ ಅಭಿವೃದ್ಧಿಯ ಬಗ್ಗೆ ಸಮಿತಿಯು ವರದಿಯನ್ನು ನೀಡಿದ್ದು, ಜಯಕೃಷ್ಣ ಎ. ಶೆಟ್ಟಿ ಯವರು ನನ್ನನ್ನು ಎಲ್ಲಿ ಸಿಕ್ಕಿದರೂ ಸಮಾಜದ ಬಗ್ಗೆ, ಜಿಲ್ಲೆಯ ಭವಿಷ್ಯದ ಅಭಿವೃದ್ಧಿಯ ಚಿಂತೆ ವ್ಯಕ್ತಪಡಿಸುತ್ತಿದ್ದು ಇದಕ್ಕೆ ಸ್ಪಂದಿಸಬೇಕಾದದ್ದು ನನ್ನ ಕರ್ತ್ಯವ್ಯ. ಈ ಬಗ್ಗೆ ಸಮಿತಿಯ ಸದಸ್ಯರೊಂದಿಗೆ ಸೂಕ್ತ ಸಭೆ ನಡೆಸಲಿದ್ದೇವೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಜಿಲ್ಲೆಗಳ ಅಭಿವೃದ್ಧಿಯೊಂದಿಗೆ ಎಲ್ಲಾ ಜಾತಿ ಮತ ಧರ್ಮದವರನ್ನು ಒಗ್ಗೂಡಿಸಿ ಸಾಮರಸ್ಯವನ್ನು ನಿರ್ಮಾಣ ಮಾಡುತ್ತಿದ್ದು ಇದು ರಾಜ್ಯಕ್ಕೆ ಮಾತ್ರವಲ್ಲ ನಮ್ಮ ದೇಶಕ್ಕೂ ಅತೀ ಅಗತ್ಯ. ಜಿಲ್ಲೆಗಳ ಅಭಿವೃದ್ಧಿಯು ಕೇವಲ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಮಾತ್ರವಲ್ಲ ನಮ್ಮ ಒಗ್ಗಟ್ಟು ಅತೀ ಮುಖ್ಯ. ಎಲ್ಲಾ ಸಮುದಾಯದ, ಎಲ್ಲಾ ಮತಗಳ, ಬಡ ಹಾಗೂ ಶ್ರೀಮಂತ ಮಕ್ಕಳು ಒಂದಾಗಿ ಸಹೋದರತ್ವದಿಂದ ಇರುವುದರಿಂದ ಪರಿಸರವು ತನ್ನಿಂದ ತಾನೇ ಅಭಿವೃದ್ಧಿಯಾಗುತ್ತದೆ. ಜಿಲ್ಲೆಗಳಲ್ಲಿ ಸಂವಾದದ ವಾತಾವರಣ ನಿರ್ಮಾಣ ಮಾಡಲು ನೀವು ಎಲ್ಲಾ ಸಂಘ ಸಂಸ್ಥೆಗಳು ಒಟ್ಟಾಗಿ ಸಮಿತಿಯ ಮೂಲಕ, ಕಷ್ಟವಾದರೂ ಅದರ ನೇತೃತ್ವ ವಹಿಸಬೇಕು. ದೇವರು ಎಲ್ಲಾ ಮನುಷ್ಯನಿಗೆ ಒಂದೇ ರೀತಿಯ ಆಕಾರವನ್ನು ನೀಡಿದ್ದಾರೆ. ಜಾತಿ ಮತವನ್ನು ನೋಡದೆ ಅಶಕ್ತರ ಕಣ್ಣೀರೊರೆಸುವ ಕಾರ್ಯ ಆಗಬೇಕು. ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತಾ ಇತರ ಧರ್ಮವನ್ನು ಗೌರವಿಸುವ ಕಾರ್ಯ ನಮ್ಮದಾಗಲಿ. ಜಿಲ್ಲೆಗಳ ಅಭಿವೃದ್ಧಿಗೆ ಯಾವುದೇ ಟೀಕೆ ಟಿಪ್ಪಣಿಗಳನ್ನು ಲೆಕ್ಕಿಸದೆ ಇಲ್ಲಿನ ಎಲ್ಲಾ ಜಾತೀಯ ಸಂಘಟನೆಗಳ ದೊಡ್ಡ ಮಟ್ಟದ ನೇತೃತ್ವ ಅತೀ ಅಗತ್ಯ ಎಂದರು.ಶ್ರೀದಿಗಂಬರ ಜೈನ ಮಠ, ಮೂಡಬಿದಿರೆ, ಇದರ ಜಗದ್ಗುರು ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಜಿ ಯವರು ಆಶೀರ್ವಚನ ನೀಡುತ್ತಾ ನಮ್ಮ ತುಳುನಾಡು ಮಿನಿ ಭಾರತದಂತೆ, ನೀವು ಕೇವಲ ಒಬ್ಬರೇ ಅಲ್ಲ, ಇಂದು 25 ಸಮುದಾಯಗಳನ್ನು ಗುರುತಿಸಿ ಸನ್ಮಾನಿಸಿದ್ದು ನಿಜಕ್ಕೂ ಪ್ರಶಂಸನೀಯ. ನಿಮ್ಮೆಲ್ಲರಿಂದಾಗಿ ನಮ್ಮ ಜಿಲ್ಲೆ ಬೆಳಗುತ್ತಿದೆ. ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಜೈನ ಮೂಲದ ಬಗ್ಗು ಚೌಟ, ಬಾಲು ಚೌಟ ಮೂಲದ ಜೈನ ಮನೆತನದಲ್ಲಿ ಹುಟ್ಟಿದವರು. ರಾಜಕೀಯ ಮಾಡಲು ಬಾರದೆ ಇದ್ದರೂ ರಾಜಕೀಯದವರನ್ನು ಒಳ್ಳೆಯದು ಮಾಡಲು ತೋನ್ಸೆ ಜಯಕೃಷ್ಣ ಎ.ಶೆಟ್ಟಿಯವರಿಂದ ಮಾತ್ರ ಸಾಧ್ಯ.

ಸರ್ವಧರ್ಮ ಸಮನ್ವಯವನ್ನು ಸಾರಿದ ಕೀರ್ತಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸಲ್ಲುತ್ತದೆ. ಇಂದು ಶಿಕ್ಷಕರ ದಿನ. ಜಯಕೃಷ್ಣ ಶೆಟ್ಟಿಯವರ ತಂದೆಯವರು ಶಿಕ್ಷಕರಾಗಿದ್ದು ಅದನ್ನು ನೆನಪಲ್ಲಿಟ್ಟುಕೊಂಡು ಇಂದು ನನ್ನನ್ನು ಇಂದು ಕರೆದಿದ್ದೀರಿ. ಸಮಿತಿಯ 25 ವರ್ಷಗಳ ಜೀವನದಲ್ಲಿ ತಮಗಾಗಿ ಏನು ಮಾಡದೆ ಸಮಾಜದ ಕಣ್ಣೊರೆಸುವ ಕಾರ್ಯವನ್ನು ಮಾಡಿದ್ದೀರಿ. ನಮ್ಮ ದೇಶದ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಹಾಗೂ ಉದ್ಯೋಗವನ್ನು ಒದಗಿಸುವ ಕಾರ್ಯ ಸಮಿತಿಯಿಂದ ಆಗುತ್ತಿದೆ. ಒಳ್ಳೆಯ ಮನಸ್ಸಿದ್ದಲ್ಲಿ ಇಂತಹ ಕಾರ್ಯ ಸಾಧ್ಯ. ನಿರ್ಮಲವಾದ ಮನಸ್ಸು ಆರೋಗ್ಯಕ್ಕೂ ಒಳ್ಳೆಯದು. ಇಂದು ಎಲ್ಲರೂ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರನ್ನು ಅವರ ಕಾರ್ಯವನ್ನು ಗುರುತಿಸಿ ಪ್ರಶಂಸೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಗಳಿಗೆ ಮುಂಬಯಿಗರ ಕೊಡುಗೆ ಅಪಾರ. ಹಿಂದೆ ಮುಂಬಯಿಯ ಹಣ ನಮ್ಮ ಜಿಲ್ಲೆಯವರನ್ನು ಬದುಕಿಸಿದೆ. ಸಮಿತಿಯ ಇವತ್ತಿನ ಬೆಳ್ಳಿ ಹಬ್ಬದ ಕಾರ್ಯಕ್ರಮ ಎಲ್ಲರಿಗೂ ಆನಂದ, ಶ್ರದ್ದೆ ಮತ್ತು ಸಮರ್ಪಣೆಯಿಂದ ಕೂಡಿರಲಿ," ಎಂದು ಶುಭ ಹಾರೈಸಿದರು.ಸಮಿತಿಯ 25 ನೆಯ ಸಂಸ್ಥಾಪನಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಮುಂಬಯಿಯ 25 ಜಾತೀಯ ಸಂಘಟನೆಗಳನ್ನು, ಅದರ ಅಧ್ಯಕ್ಷರುಗಳನ್ನು / ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸಮಿತಿಯ ಪರವಾಗಿ ವಿಶೇಷವಾಗಿ ಸನ್ಮಾನಿಸಿದರು.




ಸಮಿತಿಯು ಮುಂದೆ ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ - ತೋನ್ಸೆ ಜಯಕೃಷ್ಣ ಎ. ಶೆಟ್ಟಿ

ಕಳೆದ 25 ವರ್ಷಗಳಿಂದ ನಮ್ಮ ಜಿಲ್ಲೆಗಳ ಹಲವಾರು ಗಣ್ಯ ವ್ಯಕ್ತಿಗಳ, ರಾಜಕಾರಿಣಿಗಳ ಸಹಾಯ ಹಾಗೂ ಪ್ರೋತ್ಸಾಹದಿಂದ ನಮ್ಮ ಸಮಿತಿಯು ಜಿಲ್ಲೆಗಳ ಅಭಿವೃದ್ಧಿಗಾಗಿ ಹಮ್ಮಿಕೊಂಡ ಎಲ್ಲಾ ಕಾರ್ಯವನ್ನು ಸರಕಾರದ ಮೂಲಕ ಯಶಸ್ವಿಯಾಗಿ ಪೂರೈಸಿದ್ದೇವೆ. ಈ ಬಗ್ಗೆ ಜಾರ್ಜ್ ಫೆರ್ನಾಂಡೀಸ್ ರವರ ಕೊಡುಗೆ ಅಪಾರ. ಇಂದು ನಮ್ಮೊಂದಿಗೆ ಅನುಭವೀ ಅಧ್ಯಕ್ಷರಿದ್ದು ನಮ್ಮ ಮುಂದಿನ ಎಲ್ಲಾ ಯೋಜನೆಗಳು ಉನ್ನತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಸಂದೇಹವಿಲ್ಲ. ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಬಗ್ಗೆ ನಾವು ಈಗಾಗಲೇ ಪತ್ರಿಕಾಗೋಷ್ಠಿಯನ್ನು ಮಾಡಿದ್ದೇವೆ. ನಮಗೆ ಜಿಲ್ಲೆಗಳ ಅಭಿವೃದ್ದಿ ಅಗತ್ಯ. ಕರ್ನಾಟಕದ ಏಕೈಕ ಬಂದರು ಮಂಗಳೂರಲ್ಲಿದ್ದು ಜಿಲ್ಲೆ ಬೆಳೆಯಲು ತುಂಬಾ ಅವಕಾಶವಿದೆ. ಎಲ್ಲರೂ ಸೇರಿ ಜಿಲ್ಲೆಗಳಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸೋಣ. ಧರ್ಮಸ್ಥಳಕ್ಕೆ ಸರ್ವ ಮತೀಯರು ಬೇಟಿಯಿತ್ತು ಪ್ರಸಾದ ಸ್ವೀಕರಿಸುತ್ತಿದ್ದು, ಈ ಶ್ರದ್ದಾ ಕೇಂದ್ರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಿರಲಿ. ಈ ಬಗ್ಗೆ ನಾವು ಡಾ.ವೀರೇಂದ್ರ ಹೆಗ್ಡೆಯವರನ್ನು ಬೇಟಿಯಾಗಿದ್ದೇವೆ. ಈ ಬಗ್ಗೆ ಸರಕಾರವು ಸೂಕ್ತ ಕ್ರಮವನ್ನು ಕೈಗೊಂಡಿದ್ದು ಅಭಿನಂದನೀಯ. ಇಂದು ಇಡೀ ಜಗತ್ತೇ ಧರ್ಮದ ಆಧಾರದಲ್ಲಿ ನಿಂತಿದೆ. ನಮ್ಮ ಮುಂದಿನ ನೂರು ವರ್ಷಗಳ ಯೋಜನೆಯ ಬಗ್ಗೆ ಯು.ಟಿ.ಖಾದರ್ ಅವರಿಗೆ ಹಸ್ತಾಂತರಿಸಿದ್ದು ಅದರ ಕೆಲಸ ಮುಂದುವರಿಯುತ್ತಿದ್ದು ಆದಷ್ಟು ಬೇಗನೇ ಕಾರ್ಯರೂಪಕ್ಕೆ ತರುವಂತೆ ಸ್ಪೀಕರ್‌ ರವರನ್ನು ಒತ್ತಾಯಿಸುತ್ತಾ ನಮ್ಮೆಲ್ಲರ ಜೀವನವನ್ನು ಸಾರ್ಥಕಗೊಳಿಸಬೇಕಾಗಿ ವಿನಂತಿಸಿದರು. ಉಪಾಧ್ಯಕ್ಷ ಸಿ.ಎ .ಐ.ಆರ್. ಶೆಟ್ಟಿಯವರು ಸ್ವಾಗತಿಸಿದರು.



Ads on article

Advertise in articles 1

advertising articles 2

Advertise under the article