
ಮೈಸೂರು: ವಸಂತ ಗಿಳಿಯಾರ್ ವಿರುದ್ಧ ಮತ್ತೊಂದು ಎಫ್‌ಐಆರ್
ಮೈಸೂರು: ಧರ್ಮಗಳ ನಡುವೆ ಅಶಾಂತಿ ಉಂಟು ಮಾಡುವಂತಹ ವೈಯಕ್ತಿಕ ಚಾರಿತ್ರ್ಯ ವಧೆ ನಡೆಸಿದ್ದಾರೆ' ಎಂದು ಆರೋಪಿಸಿ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಅವರು ವಸಂತ ಗಿಳಿಯಾರ್ ವಿರುದ್ಧ ವಿಜಯನಗರ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಸೌಜನ್ಯ ಎಂಬ ಬಾಲಕಿಯ ಅಪಹರಣ, ಅತ್ಯಾಚಾರ ಹಾಗೂ ಹತ್ಯೆಗೆ ನ್ಯಾಯ ಲಭಿಸಿಲ್ಲ ಎಂಬ ಸಾಮಾಜಿಕ ಹೋರಾಟ ರಾಜ್ಯಾದ್ಯಂತ ನಡೆಯುತ್ತಿದ್ದು, ಸಹಜವಾಗಿಯೇ ಮಹಿಳಾ ಪರವಾಗಿ ಕೆಲಸ ಮಾಡುತ್ತಿರುವ ಒಡನಾಡಿ ಸಂಸ್ಥೆಯು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿ ವಸಂತ ಗಿಳಿಯಾರ್ ನನ್ನನ್ನು ಕ್ರೈಸ್ತ ಧರ್ಮದವನು ಎಂದು ಗುರುತಿಸಿ, ಹಿಂದೂ ಧರ್ಮ ಹಾಗೂ ದೇವಸ್ಥಾನಗಳನ್ನು ಒಡೆಯಲು ಬಂದವನು ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸುತ್ತಿದ್ದಾರೆ' ಎಂದು ದೂರಿದ್ದಾರೆ.
ಸ್ಟ್ಯಾನ್ಲಿ ಧರ್ಮಸ್ಥಳವನ್ನು ಹಂದಿ ಹೊಡೆದಂತೆ ಹೊಡೆಯಬೇಕೆಂದು ಎಂದು ಹೇಳಿದ್ದಾರೆ ಎಂಬ ವದಂತಿಯನ್ನು ಸಮಾಜದಲ್ಲಿ ಹರಡಿದ್ದಾರೆ. ಆ ಮೂಲಕ ಧರ್ಮಗಳ ಒಳಗಿನ ಧಾರ್ಮಿಕ ಭಾವನೆ ಕೆಣಕುತ್ತಾ, ಸಮಾಜದ ಒಂದು ಭಾಗವನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ವೈಯಕ್ತಿಕ ತೇಜೋವಧೆಯನ್ನೂ ಮಾಡಿದ್ದಾರೆ. ಒಡನಾಡಿ ಸಂಸ್ಥೆಯ ಆಶ್ರಿತರ ಜೀವಕ್ಕೆ ಕುಂದು ತರುವಂತಹ ಜಾತಿ-ಧರ್ಮಗಳ ಕಲಹ ಮತ್ತು ದಂಗೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಶಾಂತಿಯುತ ಜೀವನಕ್ಕೆ ಹಾಗೂ ಜೀವ ಭದ್ರತೆಗೆ ಧಕ್ಕೆ ಮಾಡುತ್ತಿರುವ ವಸಂತ ಗಿಳಿಯಾರ್ ವಿರುದ್ಧ ಕಾನೂನು ಕ್ರಮವಹಿಸಬೇಕು' ಎಂದು ದೂರಿನಲ್ಲಿ ತಿಳಿಸಿದ್ದಾರೆ.