ಉಡುಪಿ: ಮಿಷನ್ ಆಸ್ಪತ್ರೆ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ನಡೆಸುವ ಕಾರ್ಯಗಳು ಶ್ಲಾಘನೀಯ- ಜಿಲ್ಲಾಧಿಕಾರಿ

 


ಉಡುಪಿ: ಸಿಎಸ್‌ಐ ಲೊಂಬಾರ್ಡ್‌ ಸ್ಮಾರಕ ಆಸ್ಪತ್ರೆಯು ಸ್ತನ ಕ್ಯಾನ್ಸರ್‌ ಪರೀಕ್ಷಾ ಘಟಕವನ್ನು ( ಮ್ಯಾಮೋಗ್ರಫಿ) ಸ್ಥಾಪಿಸುವ ಮೂಲಕ ಸ್ತನ ಕ್ಯಾನ್ಸರ್‌ ಬಗ್ಗೆ  ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟ.ಕೆ. ಹೇಳಿದರು.

ನಗರದ ಸಿಎಸ್‌ಐ ಲೊಂಬಾರ್ಡ್‌ ಸ್ಮಾರಕ (ಮಿಷನ್‌) ಆಸ್ಪತ್ರೆಯ ಸ್ತನ ಕ್ಯಾನ್ಸರ್‌ ಪರೀಕ್ಷಾ ಘಟಕವನ್ನು ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಸ್ಥೆಯು ಮಹಿಳೆಯರು  ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ನಡೆಸುವ ಕಾರ್ಯಗಳು ಶ್ಲಾಘನೀಯ ಎಂದರು.

ಸಿಎಸ್‌ಐ ಕೆಎಸ್‌ಡಿ ಖಜಾಂಚಿ ಐವನ್‌ ಡಿ ಸೋನ್ಸ್‌ ಮಾತನಾಡಿ, ತಾಯಿ, ಮಗುವಿನ ಆರೈಕೆಯ ಧ್ಯೇಯದಿಂದ ಆರಂಭವಾಗಿರುವ ಆಸ್ಪತ್ರೆಯು ಇಂದು ಮಹಿಳಾ ಸಬಲೀಕರಣಕ್ಕಾಗಿಯೂ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಆಸ್ಪತ್ರೆಯ ನಿರ್ದೇಶಕ ಸುಶಿಲ್‌ ಜತ್ತನ್ನ ಮಾತನಾಡಿ, ಮಿಷನ್‌ ಆಸ್ಪತ್ರೆಯು ಬೇರೆ ಬೇರೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ಲಾಭದಾಯಕವಲ್ಲದ ಮ್ಯಾಮೋಗ್ರಫಿ ಘಟಕವನ್ನು ಸಾಮಾಜಿಕ ಬದ್ಧತೆಯಿಂದ ಆರಂಭಿಸಿದೆ ಎಂದು ಹೇಳಿದರು.

ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್‌ ಸಾಮಾನ್ಯವಾಗಿದ್ದು, 50 ವರ್ಷದೊಳಗಿನವರಲ್ಲೂ ಇದು ಕಂಡು ಬರುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಭಾರತಿ ಹೇಮಚಂದ್ರ, ಡಾ.ದೀಪಾ ರಾವ್‌, ತನುಜಾ ಮಾಬೆನ್‌ ಉಪಸ್ಥಿತರಿದ್ದರು. ಡಾ.ಸುಜಾ ಕಾರ್ಕಡ ಸ್ವಾಗತಿಸಿದರು. ಶೈವಲ್ಯ ದೇವಾಡಿಗ ವಂದಿಸಿದರು.