
ಉಡುಪಿ:ನನ್ನ ಮಾತಲ್ಲಿ ತಪ್ಪು ಹುಡುಕುವವರೇ ಹೆಚ್ಚು, ನನ್ನ ಬಾಯಲ್ಲಿ ತಪ್ಪು ನುಡಿಸದಂತೆ ಕೃಷ್ಣನಲ್ಲಿ ಪ್ರಾರ್ಥನೆ- ಡಿಸಿಎಂ ಡಿ.ಕೆ. ಶಿವಕುಮಾರ್
ಉಡುಪಿ: ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ಅದೇ ರೀತಿ ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶರಾದ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದೇ ಹೆಚ್ಚಾಗಿದೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಕೃಷ್ಣನ ದಿವ್ಯ ದರ್ಶನ ಮಾಡಿ ಶ್ರೀಗಳ ಜೊತೆಯಲ್ಲಿ ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಎಂದು ತಿಳಿಸಿದರು.
ಧರ್ಮ, ಪೂಜೆ, ಭಕ್ತಿ ಪ್ರದರ್ಶನಕ್ಕಿರುವ ವಸ್ತುಗಳಲ್ಲ. ಎಲ್ಲರ ಆಚಾರ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು ನಮ್ಮ ಕರ್ತವ್ಯ. ನಾನು ಅನೇಕ ಬಾರಿ ಕೃಷ್ಣ ಮಠಕ್ಕೆ ಹಾಗೂ ಕೃಷ್ಣನ ದಿವ್ಯ ಸಾನಿಧ್ಯಕ್ಕೆ ಬಂದಿದ್ದೇನೆ. ಶ್ರೀಗಳು ನನಗೆ ಕೃಷ್ಣನ ವಿಶ್ವರೂಪ ದರ್ಶನ ತೋರಿಸಿದರು. ನಾನು ಬಂಧಿಖಾನೆ ಸಚಿವನಾಗಿದ್ದಾಗಲೂ ನನಗೆ ಮಠದಿಂದ ಆಹ್ವಾನ ಬಂದಿತ್ತು. ಈ ವಿಶ್ವರೂಪ ದರ್ಶನವನ್ನು ನೋಡಿದಾಗ ನನಗೆ ನನ್ನ 50-60 ವರ್ಷಗಳ ಬದುಕಿನ ನೆನಪು ತಲೆಯಲ್ಲಿ ಸುಳಿದವು.
ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ನ ತ್ವತ್ಸಮೋಸ್ತ್ಯಾಭ್ಯಧಿಕಃ ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ” ಎಂದು ಭಗವದ್ಗೀತೆಯ ಶ್ಲೋಕ ಪಠಿಸಿದರು.
ಉಡುಪಿಗೆ ಬಂದು ಶ್ರೀಗಳ 64ನೇ ಜನ್ಮ ನಕ್ಷತ್ರೋತ್ಸವದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಂತೋಷವಾಗಿದೆ. ಶ್ರೀಗಳು ನನಗೆ ಬಹಳ ಅಕ್ಕರೆಯಿಂದ ಆಶೀರ್ವಾದ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ತಿಳಿಸಿದರು.