
ಬೆಂಗಳೂರು: ಅಧಿಕಾರವಿಲ್ಲದೇ ಚಡಪಡಿಸುತ್ತಿರುವ ರಾಹುಲ್ ಗಾಂಧಿಯಿಂದ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆಧಾರರಹಿತ ಆರೋಪ- ರಾಜ್ಯ ಬಿಜೆಪಿ ತಿರುಗೇಟು
ಬೆಂಗಳೂರು: ಅಧಿಕಾರವಿಲ್ಲದೇ ಚಡಪಡಿಸುತ್ತಿರುವ ರಾಹುಲ್ ಗಾಂಧಿ ಅವರು ಈಗ ಪ್ರತಿದಿನ ಬೆಳಗೆದ್ದು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
2024ರಲ್ಲಿ ಯಾರ ಸರ್ಕಾರ ರಾಜ್ಯದಲ್ಲಿತ್ತು? ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದಲ್ಲಿ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತದೆ. ನಿಮ್ಮದೇ ಅಧಿಕಾರಿಗಳ ಮೇಲೆ ನಿಮಗೆ ನಂಬಿಕೆ ಇಲ್ಲವೇ? ನಿಮ್ಮದೇ ಬೂತ್ ಏಜೆಂಟ್ ಕುರಿತು ನಿಮಗೆ ನಂಬಿಕೆ ಇಲ್ಲವೇ? ಕಾಂಗ್ರೆಸ್‌ಗೆ 1 ಸ್ಥಾನದಿಂದ ಲೋಕಸಭೆಯಲ್ಲಿ 9 ಸ್ಥಾನ ಹೇಗೆ ಬಂತು? ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಾಗ ಇಲ್ಲದ ಮತ ಕಳ್ಳತನದ ಅನುಮಾನ, ಬಿಜೆಪಿ ಹೆಚ್ಚು ಸ್ಥಾನ ಗೆದ್ದಾಗ ಮಾತ್ರ ಬರುವುದು ಯಾಕೆ? ರಾಜ್ಯದ ಪ್ರಜ್ಞಾವಂತ ಮತದಾರರು ಏನು ಗಾಂಧಿ ಕುಟುಂಬದ ಕೈಗೊಂಬೆಯೇ? ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಬೇಕು.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಮಾಡುವುದು ಜನತಾ ಪ್ರಾತಿನಿಧ್ಯ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಶಿಕ್ಷಾರ್ಹ ಅಪರಾಧ. ಚುನಾವಣೆಯ ನಡವಳಿಕೆ ಬಗ್ಗೆ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಎಲೆಕ್ಷನ್ ಪಿಟಿಷನ್ ಮೂಲಕ ಹೈಕೋರ್ಟ್‌ನಲ್ಲಿ ಸಲ್ಲಿಸಬೇಕಿತ್ತು. ಆದರೆ, ಮತದಾರರ ಕರಡು ಪಟ್ಟಿ ಪ್ರಕಟಿಸಿದ ಬಳಿಕ ಹಾಗೂ ಚುನಾವಣೆ ಫಲಿತಾಂಶದ 60 ದಿನಗಳ ಒಳಗೆ ಯಾವುದೇ ಆಕ್ಷೇಪಣೆ ಸಲ್ಲಿಸದ ಕಾಂಗ್ರೆಸ್ ಈಗ ಜನರ ಭಾವನೆ ಜೊತೆ ಚೆಲ್ಲಾಟವಾಡಲು ಹೊರಟಿದೆ.