
ಬೆಳ್ತಂಗಡಿ:ವಸಂತ ಗಿಳಿಯಾರ್ ವಿರುದ್ದ ಮತ್ತೊಂದು ದೂರು ದಾಖಲು
28/08/2025 01:10 AM
ಬೆಳ್ತಂಗಡಿ: ಧರ್ಮ–ಧರ್ಮಗಳ ನಡುವೆ, ಜಾತಿಗಳ ಮಧ್ಯೆ ದ್ವೇಷ ಹುಟ್ಟುವಂತೆ ಪ್ರಚೋದನಕಾರಿಯಾಗಿ ಮಾತನಾಡಿ ಅದನ್ನು ಸಾಮಾಜಿಕ ಮಾಧ್ಯಮವಾದ ಯುಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದ ಆರೋಪದಲ್ಲಿ ವಸಂತ ಗಿಳಿಯಾರ್ ಎಂಬುವವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
‘ಬೆಂಗಳೂರಿನಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ವಸಂತ ಗಿಳಿಯಾರ್ ಅವರು ಬೆಳ್ತಂಗಡಿ ಭಾಗದಲ್ಲಿ ಮಿಷನರಿಗಳ ಪ್ರಭಾವದಿಂದ ಹಿಂದೂಗಳ ತುಳಸಿಕಟ್ಟೆಯನ್ನು ಒಡೆಸಿ ಅಲ್ಲಿ ಶಿಲುಬೆಯನ್ನು ಇಡಲಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದ ಬಳಿಕ ಶಿಲುಬೆಗಳನ್ನು ತೆಗೆದು ಮತ್ತೆ ತುಳಸಿಕಟ್ಟೆಗಳನ್ನು ಸ್ಥಾಪಿಸಿದ್ದರು’ ಎಂದು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹೇಳಿಕೆ ಧರ್ಮ– ಧರ್ಮಗಳ ನಡುವೆ ಅಪನಂಬಿಕೆ ಸೃಷ್ಟಿಯಾಗಿ ಘರ್ಷಣೆಗೆ ಕಾರಣವಾಗಿದೆ ಎಂದು ದೂರು ನೀಡಿದ್ದರು.