
ಉಡುಪಿ:ಗಣೇಶ ಚತುರ್ಥಿ ಸಂಭ್ರಮಕ್ಕೆ ತಣ್ಣೀರೆರಚಿದ ಮಳೆ- ಜಿಲ್ಲೆಯಲ್ಲಿ 486 ಗಣೇಶೋತ್ಸವ ಆಯೋಜನೆ - ಮೊದಲ ದಿನ 201 ವಿಸರ್ಜನೆ- ಮಳೆ ಅಡ್ಡಿ !
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಬಾರಿ 486 ಸಾರ್ವಜನಿಕ ಗಣೇಶೋತ್ಸವಗಳು ನಡೆಯಲಿವೆ. ಕಳೆದ ವರ್ಷಕ್ಕಿಂತ ಐದು ಪ್ರತಿಷ್ಠೆಗಳು ಹೆಚ್ಚಾಗಿವೆ. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ಕಡಿಯಾಳಿ) ಜಿಲ್ಲೆಯ ಅತ್ಯಂತ ಹಳೆಯ ಸಂಸ್ಥೆಯಾಗಿದೆ. ಬ್ರಹ್ಮಾವರ ಮತ್ತು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗಣಪತಿಗಳನ್ನು ಪೂಜಿಸಲಾಗುತ್ತಿದೆ. ಆಗಸ್ಟ್ 27 ರಿಂದ ಗಣಪತಿ ವಿಸರ್ಜನೆ ಪ್ರಾರಂಭವಾಗಿ ಅಕ್ಟೋಬರ್ 2 ರವರೆಗೆ ನಡೆಯಲಿದೆ.ಬ್ರಹ್ಮಾವರ ಹಾಗೂ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಅತ್ಯಧಿಕ 47 ಸಾರ್ವಜನಿಕ ಗಣಪತಿಯನ್ನು ಪೂಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 3 ಅತಿ ಸೂಕ್ಷ್ಮ ಹಾಗೂ 77 ಸೂಕ್ಷ್ಮ ಗಣಪತಿಗಳಿದ್ದು ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಸಾರ್ವಜನಿಕ ಗಣಪತಿಗಳ ವಿಸರ್ಜನೆ ಆ.27ರಂದು ಅತ್ಯಧಿಕ(201) ಆಗಿದ್ದು, ಆ.28 ರಂದು 119, ಆ.29 ರಂದು 114..ಹೀಗೆ ಸೆ.7ರ ತನಕ ವಿಸರ್ಜನೆ ನಡೆದರೆ, ಅ.2ರಂದು ಕೊನೆಯದಾಗಿ ಪಡುಬಿದ್ರಿ ಸಾರ್ವಜನಿಕ ಗಣಪತಿ ವಿಸರ್ಜನೆಯಾಗಲಿದೆ.
ಮೊದಲ ದಿನವಾದ ನಿನ್ನೆ ಸುಮಾರು 201 ಕಡೆಗಳಲ್ಲಿ ಗಣಪತಿ ವಿಸರ್ಜನೆ ಮಾಡಲಾಗಿದೆ.ಬಹುತೇಕ ಕಡೆ ಮೆರವಣಿಗೆ ಸಂದರ್ಭ ಮಳೆಯಿಂದಾಗಿ ಆಡಚಣೆ ಉಂಟಾಯಿತು.ಬುಧವಾರ ಸಂಜೆಯಿಂದ ರಾತ್ರಿತನಕ ಸತತ ಮಳೆಯಾಗಿದ್ದು ಬಹುತೇಕ ಕಡೆಗಳಲ್ಲಿ ಜನರ ಸಂಖ್ಯೆ ವಿರಳ ಇತ್ತು.ಇಂದು ಬೆಳಿಗ್ಗಿನಿಂದಲೇ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.ಇಂದು ಜಿಲ್ಲೆಯಾದ್ಯಂತ 119 ಕಡೆಗಳಲ್ಲಿ ವಿಸರ್ಜನೆಗಳು ನಡೆಯಲಿವೆ. ಒಟ್ಟಾರೆ ಈ ಬಾರಿಯ ಹಬ್ಬಕ್ಕೆ ಮಳೆ ತಣ್ಣೀರೆರಚಿದ್ದು ಮುಖ್ಯವಾಗಿ ಯುವಕರಿಗೆ ನಿರಾಶೆ ಉಂಟುಮಾಡಿದೆ.