
ಬಂಟ್ವಾಳ: ಪಿಎಸ್‌ಐ ಆತ್ಮಹತ್ಯೆಗೆ ಧರ್ಮಸ್ಥಳದ ಎಸ್‌ಐಟಿ ಲಿಂಕ್ ಮಾಡಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್- ಪ್ರಕರಣ ದಾಖಲು
02/08/2025 06:40 AM
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐಯ ಆತ್ಮಹತ್ಯೆ ಪ್ರಕರಣವನ್ನು ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡದಿಂದ ನಡೆಯುತ್ತಿರುವ ಪ್ರಕರಣವೊಂದರ ತನಿಖೆಗೆ ಸಂಬಂಧ ಕಲ್ಪಿಸಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ ಪೋಸ್ಟ್ ವಿರುದ್ಧ ಎಸ್‌ಐ ಪುತ್ರಿ ಕ್ಷಮಾ ನೀಡಿದ ದೂರಿನನ್ವಯ ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಶಿರಸಿ ಮೂಲದ ಖೀರಪ್ಪ ಘಟಕಾಂಬಳೆ ಅವರು ಜು. 20ರಂದು ಬಂಟ್ವಾಳ ಪೇಟೆಯಲ್ಲಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪುತ್ರಿ ಕ್ಷಮಾ ಅವರು ಜು. 28ರಂದು ಮೊಬೈಲ್ ನೋಡುತ್ತಿದ್ದ ಸಂದರ್ಭ ನಾಲ್ಕು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಖೀರಪ್ಪ ಅವರ ಸಮವಸ್ತ್ರದ ಪೋಟೊ ಹಾಕಿ ಅವರ ಆತ್ಮಹತ್ಯೆಗೂ ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿರುವ ಪ್ರಕರಣಕ್ಕೂ ಸಂಬಂಧ ಕಲ್ಪಿಸಿ ಪೋಸ್ಟ್ ಹಾಕಿರುವುದು ಕಂಡುಬಂದಿತ್ತು. ಈ ಬಗ್ಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.