
ಧರ್ಮಸ್ಥಳ: ದೂರುದಾರನಿಗೆ ಬೆದರಿಕೆ - ಇನ್ಸ್‌ಪೆಕ್ಟರ್ ಮುಂಜುನಾಥ್ ರನ್ನು ದೂರ ಇಟ್ಟ ಎಸ್ಐಟಿ ತನಿಖಾ ತಂಡ
ಧರ್ಮಸ್ಥಳ: ಎಸ್ಐಟಿ ರಚನೆ ಬಳಿಕ ಸ್ವಯಂಪ್ರೇರಿತರಾಗಿ ಕೆಲ ಅಧಿಕಾರಿಗಳು ತನಿಖೆಯಿಂದ ಹಿಂದೆ ಸರಿದಿದ್ದ ಘಟನೆಗಳು ನಡೆದಿದ್ದವು. ಇದೀಗ ಎಸ್ಐಟಿ ತಂಡದಿಂದ ಮುಂಜುನಾಥ್ ದೂರ ಉಳಿದಿದ್ದಾರೆ. ಐದನೇ ದಿನದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಮುಂಜುನಾಥ್ ಕಾಣಿಸಿಕೊಂಡಿಲ್ಲ. ಮುಂಜುನಾಥ್ ಮೇಲೆ ದೂರು ಕೇಳಿಬಂದಿರುವ ಹಿನ್ನಲೆಯಲ್ಲಿ ಎಸ್ಐಟಿ ತಂಡವೇ ಮಂಜುನಾಥ್‌ರನ್ನು ದೂರವಿಟ್ಟಿದೆ ಎಂದು ಹೇಳಲಾಗುತ್ತಿದೆ.
ಎಸ್ಐಟಿ ತನಿಖೆ ಧರ್ಮಸ್ಥಳದಲ್ಲಿ ತನಿಖೆ ಆರಂಭಿಸಿದ ದಿನದಿಂದ ಇನ್ಸ್‌ಪೆಕ್ಟರ್ ಮುಂಜುನಾಥ್ ಮುಂಚೂಣಿಯಲ್ಲಿದ್ದರು. ದೂರುದಾರನ ವಿಚಾರಣೆ, ದೂರುದಾರನ ಜೊತೆ ಸ್ಥಳ ಮಹಜರು ಹಾಗೂ ಗುರತಿಸಿದ ಸ್ಥಳದಲ್ಲಿ ಉತ್ಖನನ ವೇಳೆ ಇನ್ಸ್‌ಪೆಕ್ಟರ್ ಮುಂಜುನಾಥ್ ಮುಂಚೂಣಿಯಲ್ಲಿದ್ದು ತನಿಖೆ ನಡೆಸುತ್ತಿದ್ದರು. ಆದರೆ ದೂರುದಾರನ ಮೇಲೆ ಒತ್ತಡ ಹಾಕಿರುವ ಆರೋಪ ಅವರ ಮೇಲೆ ಕೇಳಿಬಂದಿದೆ. ಮುಸುಕುದಾರಿ ದೂರುದಾನ ವಕೀಲರು ಈ ಕುರಿತು ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ಮುಂಜುನಾಥ್ ಮುಸುಕುದಾರಿ ದೂರುದಾರನ ಬಂಧಿಸಿ ಜೈಲಿಗೆ ಹಾಕುವಂತೆ ಬೆದರಿಸಿದ್ದಾರೆ. ಒತ್ತಡದಿಂದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಕುರಿತು ದೂರು ನೀಡಿದ್ದೇನೆ ಎಂದು ಮುಸುಕುದಾರಿ ದೂರುದಾರನಿಂದ ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಸಿದ್ದಾರೆ ಎಂದು ವಕೀಲರು ದೂರಿದ್ದಾರೆ. ಹೀಗಾಗಿ ಇನ್ಸ್‌ಪೆಕ್ಟರ್ ಮುಂಜುನಾಥ್ ಅವರನ್ನು ಎಸ್ಐಟಿ ತಂಡದಿಂದ ಕೈಬಿಡಬೇಕು, ನಿಸ್ಪಕ್ಷಪಾತ ತನಿಖೆಯಾಗಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯ ಗೃಹ ಇಲಾಖೆಗೆ ದೂರು ನೀಡಿದ್ದಾರೆ.ಐದನೇ ದಿನವೂ ಉತ್ಖನನ ಕಾರ್ಯ ಮುಂದುವರೆದಿದೆ.