ಉಡುಪಿ: "ನಾಡಹಬ್ಬ ದಸರಾ ಕನ್ನಡಿಗರ ಹೃದಯದಲ್ಲಿ ಸೌಹಾರ್ದತೆಯ ಬೆಳಕು ಪಸರಿಸಲಿ"

ಉಡುಪಿ: "ನಾಡಹಬ್ಬ ದಸರಾ ಕನ್ನಡಿಗರ ಹೃದಯದಲ್ಲಿ ಸೌಹಾರ್ದತೆಯ ಬೆಳಕು ಪಸರಿಸಲಿ"

 



ಮೈಸೂರು ದಸರಾ ಅಂದರೆ ಚಾಮುಂಡೇಶ್ವರಿಯ ಆರಾಧನೆಯೂ ಹೌದು.ಇದೊಂದು ಸಾಂಸ್ಕೃತಿಕ ಕಲಾ ವೈಭವವೂ ಹೌದು.ಹಾಗಾಗಿ ಇದನ್ನು ಬರೇ ಒಂದು ಜಾತಿಗೋ ಮತಕ್ಕೊ ಸೀಮಿತಪಡಿಸದೆ ಎಲ್ಲ ಜಾತಿ ಜನಾಂಗದವರು ಶ್ರದ್ಧಾ ಭಕ್ತಿ ಪ್ರೀತಿ ಗೌರವದಿಂದ ಪಾಲುಗೊಂಡಾಗಲೇ ಇದೊಂದು ನಾಡ ಹಬ್ಬವಾಗಿ ಮೇಳೈಸಬಹುದು.

ಈ ನಾಡ ಹಬ್ಬದ ಆಚರಣೆಯಲ್ಲಿ ಯಾವುದೇ ರಾಜಕೀಯ ಮಾಡದೇ ಸಮಚಿತ್ತದಿಂದ ಭಾಗವಹಿಸಿದಾಗ ಇದಕ್ಕೊಂದು ವಿಶೇಷ ಮಹತ್ವ ಪ್ರಾಪ್ತಿಯಾಗುತ್ತದೆ.ವೈಭವಯುತ ದಸರಾ ಕಾರ್ಯಕ್ರಮಕ್ಕೆ  ಯಾರು ಚಾಲನೆ ನೀಡಬೇಕು ನೀಡಬಾರದು ಅನ್ನುವ ಒಣ ಚರ್ಚೆಯಲ್ಲಿ ರಾಜಕೀಯ ಮಾಡುವುದು ಬೇಡ. ಇದಾಗಲೇ ನಾಡಿನ ಶ್ರೇಷ್ಠ ಲೇಖಕಿ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ರನ್ನು ವಿನಂತಿಸಿಕೊಂಡಾಗ ಅದಕ್ಕೆ ಅವರು ಸಮ್ಮತಿಸಿ ತಮ್ಮಮನದಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿ  ನಮ್ಮೆಲ್ಲರ ಬೇಕು ಬೇಡಗಳಿಗೆ ಸ್ವಷ್ಟೀಕರಣ ನೀಡಿದ್ದಾರೆ.ನಾಡ ಹಬ್ಬ ಮೈಸೂರು  ದಸರಾ ಹಾಗೂ ಚಾಮುಂಡೇಶ್ವರಿ ಕುರಿತಾಗಿ ತಮಗಿರುವ ಸಂಬಂಧ ನಂಬಿಕೆ ಗೌರವದ ಬಗ್ಗೆ ಮನದಾಳದ ಮಾತುಗಳನ್ನು ನೀಡಿದ್ದಾರೆ.ಇಲ್ಲಿ  ನಾವು ಮುಖ್ಯವಾಗಿ ಗಮನಿಸ ಬೇಕಾದದ್ದು ಮೈಸೂರು  ಸಂಸದರು ಅರಮನೆಯ ಅರಸರಾದ ಯದುವೀರ ಒಡೆಯರ್ ನೀಡಿದ ಅಭಿಪ್ರಾಯ.ನಿಜಕ್ಕೂ ಅವರದ್ದು ರಾಜಕೀಯ ಮೀರಿದ ಘನವ್ಯಕ್ತಿತ್ವದ ನುಡಿ.ಒಡೆಯರ್ ಮಾತು ನಿಜಕ್ಕೂ ಹೃದಯದಲ್ಲಿ ಹೊಸ ಬೆಳಕು ಮೂಡಿಸುವಂತಿತ್ತು.ಅವರಿಗಿರುವ ನಾಡ ಹಬ್ಬದ ಪ್ರೀತಿ ,ಕನ್ನಡ ಭಾಷಾ ಅಭಿಮಾನ ಜಾತಿಮತ ಮೀರಿದ ಸೌಹಾರ್ದತೆಯ ನಿಲುವು ನಿಜಕ್ಕೂ ನಮ್ಮೆಲ್ಲರಿಗೂ ಮಾದರಿಯ ನಡೆ ನುಡಿಯೂ ಹೌದು.

ಅದೇ ನಮ್ಮ ರಾಜಕೀಯ ಪಕ್ಷದ ನಾಯಕರುಗಳ ಪ್ರತಿಯೊಂದು ಹೇಳಿಕೆಗಳು ನಾಡಹಬ್ಬದ  ಔಚಿತ್ಯ ಪಾವಿತ್ರ್ಯತೆಗೆ ಸಂಘರ್ಷ  ತರುವಂತಿದೆ.ಮುಸ್ಲಿಂ ರಾಷ್ಟ್ರದಲ್ಲಿ ಹಿಂದು ದೇವಾಲಯಗಳನ್ನು ಕಟ್ಟಿ ಇದೊಂದು ಸೌಹಾರ್ದತೆಯ ಸಂಕೇತವೆಂದು ಪರ ರಾಷ್ಟ್ರಗಳಲ್ಲಿ ಹಾಡಿ ಹೊಗಳಿ ವಿಶ್ವ ಮಾನವರಾಗುವ ನಾವು ಅದೇ ನಮ್ಮ ನಾಡಿನಲ್ಲಿ ನಿಂತು ಅಲ್ಪಮಾನವರಾಗಿ ಬಿಡುತ್ತೇವೆ ಅಂದರೆ ಇದೊಂದು ವಿಪರ್ಯಾಸವಲ್ಲವೇ?

ರಾಜಕೀಯ ನಾಯಕರುಗಳು ತಮ್ಮ ಪಕ್ಷದ ಕಾರ್ಯಕರ್ತರ ಮಾತು, ಕಟ್ಟುಪಾಡಿಗಳಿಗೆ ಒಳಗಾಗಿ ತಾವು ಆಡಿದ "ಮಾತೃ ಭೂಮಿಯ ಪ್ರೀತಿ ಗೌರವದ ಮಾತುಗಳಿಗೂ ಕ್ಷಮೆಯಾಚಿಸಬೇಕಾದ ಪರಿಸ್ಥಿತಿ ನಮ್ಮದಾಗಿರುವುದು ನಮ್ಮ ರಾಜಕೀಯ ವ್ಯವಸ್ಥೆಯ ಇನ್ನೊಂದು  ದುರಂತ.ಅಂತೂ ನಾಡ ಹಬ್ಬವಾದ ಮೈಸೂರು  ದಸರಾ ನಮ್ಮೆಲ್ಲರ ಹೃದಯವನ್ನು ಜೇೂಡಿಸುವ ,ಹೃದಯದಲ್ಲಿ ಸೌಹಾರ್ದತೆಯ ಬೆಳಕನ್ನು ಚೆಲ್ಲುವ ನಾಡ ಹಬ್ಬವಾಗಿ ಮೂಡಿಬರಲಿ  ಅನ್ನುವುದು ನಮ್ಮೆಲ್ಲರ ಹಾರೈಕೆ.

- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ

Ads on article

Advertise in articles 1

advertising articles 2

Advertise under the article