ಧರ್ಮಸ್ಥಳ ಪ್ರಕರಣ- ವಿದೇಶಿ ಹಣಕಾಸು ನೆರವು ಬಗ್ಗೆ ಇ.ಡಿ ಮೂಲಕ ತನಿಖೆ ನಡೆಸಿ- ಕೇಂದ್ರ ಗೃಹ ಸಚಿವರಿಗೆ ಸಂಸದ ಕೋಟ ಪತ್ರ

ಧರ್ಮಸ್ಥಳ ಪ್ರಕರಣ- ವಿದೇಶಿ ಹಣಕಾಸು ನೆರವು ಬಗ್ಗೆ ಇ.ಡಿ ಮೂಲಕ ತನಿಖೆ ನಡೆಸಿ- ಕೇಂದ್ರ ಗೃಹ ಸಚಿವರಿಗೆ ಸಂಸದ ಕೋಟ ಪತ್ರ


ಉಡುಪಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಮತ್ತಿತರರಿಗೆ ವಿದೇಶದಿಂದ ಹಣಕಾಸು ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯದ(ಇ.ಡಿ) ಮೂಲಕ ತನಿಖೆ ನಡೆಸುವಂತೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಗುಂಪೊಂದು ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಲು ಸಂಚು ರೋಪಿಸಿರುವ ಬಗ್ಗೆ ವರದಿಯಾಗಿದೆ. ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ವಿರುದ್ಧ ಸಂಚು ನಡೆದಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಎಡಪಂಥೀಯ ಗುಂಪುಗಳ ಮನವಿ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಅನಾಮಿಕ ದೂರುದಾರನ ಮಾತುಗಳನ್ನು ನಂಬಿಕೊಂಡು ಸಿಎಂ ಸಿದ್ದರಾಮಯ್ಯನವರು ಎಸ್‌ಐಟಿ ರಚಿಸಿದ್ದಾರೆ ಎಂದೂ ವರದಿಯಾಗಿದೆ. ಇಡೀ ಸರ್ಕಾರವೇ ಅನಾಮಿಕ ವ್ಯಕ್ತಿಗೆ ಶರಣಾದಂತೆ ಕಾಣುತ್ತಿದೆ. ಬಾಹುಬಲಿ ಬೆಟ್ಟದ ಸಮೀಪ ಸೇರಿದಂತೆ ಧರ್ಮಸ್ಥಳದಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಲಾಗಿದೆ. ಭಕ್ತರಿಗೆ ಕಸಿವಿಸಿ ಉಂಟಾಗುತ್ತಿದೆ. ಮಾಧ್ಯಮಗಳ ವರದಿಗಳ ಪ್ರಕಾರ, ತಮಿಳುನಾಡಿನ ರಾಜಕಾರಣಿಯೊಬ್ಬ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದು ಕರ್ನಾಟಕದ ಹಿಂದೂಗಳ ಭಾವನೆಗೆ ಧಕ್ಕೆ ತರಲು ಯೋಜನೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಧರ್ಮಸ್ಥಳಕ್ಕೆ ಮಸಿ ಬಳಿಯಲು ಮುಸ್ಲಿಂ ಯೂಟ್ಯೂಬರ್ ಮತ್ತು ಸಹಚರರಿಗೆ ವಿದೇಶದಿಂದ ಹಣಕಾಸು ನೆರವು ದೊರೆತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ವಿರೋಧಿಸುತ್ತಿರುವವರಿಗೆ ವಿದೇಶದಿಂದ ಹಣಕಾಸಿನ ನೆರವು ಬಂದಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ ಎಂದು ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article