
ಹಿರ್ಗಾನ: ಮಗಳನ್ನೇ ಕ್ಷುಲ್ಲಕ ಕಾರಣಕ್ಕೆ ಹತ್ಯೆಗೈದ ತಾಯಿ ! ತಡವಾಗಿ ಪ್ರಕರಣ ಬೆಳಕಿಗೆ
ಕಾರ್ಕಳ : ತಾಯಿಯೋರ್ವಳು ತನ್ಮ ಮಗಳನ್ನೇ ಹತ್ಯೆಗೈದಿರುವ ಘಟನೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ವರದಿಯಾಗಿದೆ. 17 ವರ್ಷದ ಶಿಫನಾಜ್ ಕೊಲೆಯಾದ ಯುವತಿ. ಸೆ. 20ರಂದು ಶಿಫನಾಜ್ ತನ್ನ ಸ್ನೇಹಿತನನ್ನು ಭೇಟಿಯಾಗಲು ಉಡುಪಿಗೆ ಹೋಗಿ ಬರುವುದಾಗಿ ತಾಯಿಯಲ್ಲಿ ಹೇಳಿದ್ದು ಅದಕ್ಕೆ ತಾಯಿ ಗುಲ್ಝಾರ್ ಬಾನು (45) ನಿರಾಕರಿಸಿದ್ದಳು. ಇದರಿಂದ ತಾಯಿ ಹಾಗೂ ಮಗಳ ಮಧ್ಯೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಕುತ್ತಿಗೆ ಬಿಗಿಹಿಡಿದು ಉಸಿರುಗಟ್ಟಿಸಿ ಶಿಫನಾಜ್‌ಳನ್ನು ಹತ್ಯೆ ಮಾಡಲಾಗಿದೆ.
ಶಿಫನಾಜ್ ಸೆ. 20ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಶಿಫನಾಜ್ ತಂದೆ ಶೇಖ್ ಮುಸ್ತಾಫ್ ದೂರು ನೀಡಿದ್ದು, ಶಿಫನಾಜ್ ಆಕೆಯ ಸ್ನೇಹಿತ ಮಹಮ್ಮದ್ ಸಲೀಂನನ್ನು ಉಡುಪಿಯಲ್ಲಿ ಭೇಟಿಯಾಗಲು ಹೋಗುವುದಾಗಿ ತಾಯಿಯಲ್ಲಿ ಹೇಳಿರುತ್ತಾಳೆ. ಈ ವಿಚಾರವಾಗಿ ತಾಯಿ ಮಗಳ ಮಧ್ಯೆ ಜಗಳವಾಗಿದ್ದು ಕೋಪಗೊಂಡ ಶಿಫನಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
ಬಳಿಕ , ಶಿಫನಾಜ್ ಸಾವು ಆತ್ಮಹತ್ಯೆಯಲ್ಲ. ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎನ್ನುವ ವರದಿ ಪೋಸ್ಟ್ ಮಾರ್ಟಂನಿಂದ ತಿಳಿದುಬಂತು. ಸಾವಿನ ಸತ್ಯ ಸಂಗತಿ ಪೋಸ್ಟ್ ಮಾರ್ಟಂನಿಂದ ಬಹಿರಂಗಗೊಳ್ಳುತ್ತಿದ್ದಂತೆ ಗುಲ್ಝಾರ್ ಬಾನುಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ತಾನು ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾಳೆ. ಅ. 2ರಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.