
ಮಣಿಪಾಲ: ಆ. 26 ರಂದು ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ
ಉಡುಪಿ: ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರ ( ಎಂಎಸ್‌ಡಿಸಿ), ಮಣಿಪಾಲ್ ವಿಷನ್ ಡಿಜಿಟಲ್ ಇಂಡಿಯಾ, ಇಂಟೆಲ್ ಮತ್ತು ಗ್ಲೋಬಲ್ ಎಐ ಸೊಸೈಟಿ ಸಹಯೋಗದಲ್ಲಿ ಇದೇ 26 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಎಂಎಸ್‌ಡಿಸಿ ಅಧ್ಯಕ್ಷ ಬ್ರಿಗೇಡಿಯರ್ ಸುರ್ಜಿತ್ ಪಾಬ್ಲಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇಂಟೆಲ್ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಸಿಯಾಂಗ್ ಬೂನ್ ನ್ಗೂ, ಅಮೆರಿಕದ ಯೂನಿವರ್ಸಿಟಿ ಆಫ್ ಸೌಥರ್ನ್ ಕ್ಯಾಲಿಫೋರ್ನಿಯಾದ ಉಂಬೆರ್ಟೊ ಸುಲ್ಪಾಸ್ಸೋ, ಏಷ್ಯಾ ಎಐ ಅಸೋಸಿಯೇಷನ್ ಅಧ್ಯಕ್ಷ ಎಲ್ ಕ್ವಾನ್ ಪಾಲ್ಗೊಳ್ಳುವರು ಎಂದರು.
ಮಾಹೆ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಳ್, ಡಾ. ಟಿ.ಎಂ.ಎ. ಪೈ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ತೋನ್ಸೆ ಸಚಿನ್ ಪೈ ಉಪಸ್ಥಿತರಿರುವರು ಎಂದು ವಿವರಿಸಿದರು.
ಮಣಿಪಾಲವನ್ನು ಎಐ ಶಿಕ್ಷಣ, ಸಂಶೋಧನೆ ಮತ್ತು ಕೈಗಾರಿಕಾ ಸಹಭಾಗಿತ್ವದ ಕೇಂದ್ರವಾಗಿಸುವುದು, ಆಧುನಿಕ ಎಐ ಲ್ಯಾಬ್‌ಗಳು, ಡಿಜಿಟಲ್ ಕ್ಲಾಸ್‌ರೂಮ್‌ಗಳು, ಕೈಗಾರಿಕೆ ಆಧರಿತ ಪಠ್ಯಕ್ರಮ, ಜಾಗತಿಕ ಸಹಭಾಗಿತ್ವ ಈ ಎಐ ಶ್ರೇಷ್ಠತಾ ಕೇಂದ್ರದ ಉದ್ಧೇಶವಾಗಿದೆ ಎಂದು ಅವರು ಹೇಳಿದರು.
ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಎಐ, ಎಐ ವೀಲ್ಸ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತಲುಪುವ ಸಮಾವೇಶಿತ ಶಿಕ್ಷಣದ ಗುರಿಯನ್ನು ಹೊಂದಲಾಗಿದೆ ಎಂದೂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹರಿಕೃಷ್ಣ ಮಾರಮ್, ರಾಜಲಕ್ಷ್ಮಿ, ಅಂಜಯ್ಯ ಉಪಸ್ಥಿತರಿದ್ದರು.