
ಮಣಿಪಾಲ:ಆನ್‌ಲೈನ್ ಟಾಸ್ಕ್ ನೆಪದಲ್ಲಿ ಮಹಿಳೆಗೆ 8 ಲಕ್ಷ ರೂ. ಪಂಗನಾಮ !
06/08/2025 08:57 AM
ಮಣಿಪಾಲ: ಆನ್‌ಲೈನ್ ಟಾಸ್ಕ್ ನೆಪದಲ್ಲಿ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಉಡುಪಿಯ ರೇಣುಕಾ ವಂಚನೆಗೆ ಒಳಗಾದವರು.
ಅವರು ಇನ್‌ಸ್ಟಾಗ್ರಾಂನಲ್ಲಿ ಕೆಲಸದ ಕುರಿತ ವೀಡಿಯೋ ನೋಡುತ್ತಿರುವಾಗ ಒಂದು ಲಿಂಕ್ ಬಂದಿದ್ದು, ಅದನ್ನು ತೆರೆದಾಗ ಟೆಲಿಗ್ರಾಂ ಯೂಸರ್ ಐಡಿ ಒದಗಿಸಿ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿತ್ತು. ಅದರಂತೆ ರೇಣುಕಾ ಅವರು ಹೆಸರು, ವಿಳಾಸ ಹಾಗೂ ಬ್ಯಾಂಕ್ ವಿವರವನ್ನು ನೀಡಿದ್ದರು. ಅನಂತರ ಆರೋಪಿಗಳು ಟಾಸ್ಕ್ ನೀಡಿ ಮೊದಲಿಗೆ ರೇಣುಕಾ ಅವರಿಂದ ಹಣವನ್ನು ಹಾಕಿಸಿಕೊಂಡು ಸಣ್ಣ ಮೊತ್ತವನ್ನು ಮರುಪಾವತಿಸಿದ್ದರು. ಅನಂತರ ಟಾಸ್ಕ್ ನೀಡಿ 7,63,080 ರೂ.ಗಳನ್ನು ಹಂತಹಂತವಾಗಿ ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.