
ಉಡುಪಿ: ಕನ್ನಡ ನಾಮಫಲಕ ಅಳವಡಿಸಲು 15 ದಿನಗಳ ಗಡುವು- ಅನುಷ್ಠಾನಗೊಳ್ಳದಿದ್ದರೆ ಹೋರಾಟ- ಕರವೇ ಅರಾ ಪ್ರಭಾಕರ ಪೂಜಾರಿ
ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ಉಡುಪಿ ಜಿಲ್ಲಾಧ್ಯಕ್ಷ ಅರಾ ಪ್ರಭಾಕರ ಪೂಜಾರಿ ನೇತೃತ್ವದ ನಿಯೋಗವು ಇಂದು ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರನ್ನು ಭೇಟಿಯಾಗಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಮನವಿ ಸಲ್ಲಿಸಿತು.
ಆ ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅರಾ ಪ್ರಭಾಕರ ಪೂಜಾರಿ ಅವರು, ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳು, ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಶೇ. 60ರಷ್ಟು ಭಾಗ ಕನ್ನಡ ಇರಬೇಕು. ಈ ಬಗ್ಗೆ ಪೌರಾಯುಕ್ತರಿಗೆ ಮನವಿ ಮಾಡಿದ್ದೇವೆ. ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರದಿದ್ದರೆ ಅಂತಹವರ ಲೈಸನ್ಸ್ ರದ್ದು ಮಾಡುವ ಭರವಸೆಯನ್ನು ಪೌರಾಯುಕ್ತರು ಕೊಟ್ಟಿದ್ದಾರೆ ಎಂದರು. ನಾಮಫಲಕ ಬದಲಾವಣೆ ಮಾಡಲು 15 ದಿನಗಳ ಗಡುವನ್ನು ಪೌರಾಯುಕ್ತರಿಗೆ ಕೊಟ್ಟಿದ್ದೇವೆ. ಅದರೊಳಗೆ ನಾಮಫಲಕ ಬದಲಾಗದಿದ್ದರೆ ಅಂತಹ ಕಟ್ಟಡ, ವಾಣಿಜ್ಯ ಮಳಿಗೆಗಳ ನಾಮಫಲಕಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ. ಉಗ್ರವಾದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.