
ಕುಂದಾಪುರ: ಕಾಂತಾರ ಖ್ಯಾತಿಯ "ಸ್ಟಾರ್ ಕಂಬಳ ಕೋಣ" ಇನ್ನು ಬರೀ ನೆನಪು
ಕುಂದಾಪುರ: ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕೋಣ ಇನ್ನು ನೆನಪು ಮಾತ್ರ.ಕಾಂತಾರ ಸಿನೆಮಾದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ 'ಅಪ್ಪು' ಸಾವನ್ನಪ್ಪಿದೆ. ಇದರೊಂದಿಗೆ ಕರಾವಳಿ ಭಾಗದ ಕಂಬಳ ಪ್ರೇಮಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಬೇಸರ ಮನೆ ಮಾಡಿದೆ.
ಕರಾವಳಿಯಲ್ಲಿ ಕಂಬಳ ಕೋಣಗಳನ್ನು ಮನೆಯ ಸದಸ್ಯರಂತೆಯೇ ಕಾಣಲಾಗುತ್ತದೆ.ಅದಕ್ಕೆ ಬೇಕಾದ ಆಹಾರ ಆಶ್ರಯ ಆರೈಕೆ...ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ.ಹೀಗಾಗಿ ಕಂಬಳ ಕೋಣ ಸತ್ತಾಗಲೂ ಮನುಷ್ಯರಿಗೆ ಮಾಡುವಷ್ಟೇ ಶ್ರದ್ಧೆಯಿಂದ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ಬೈಂದೂರು ತಾಲೂಕಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು. ಕಾಂತಾರ ಚಿತ್ರದ ಶೂಟಿಂಗ್‌ಗೂ ಮೊದಲಿನಿಂದಲೂ ಈ ಕೋಣಗಳ ಮೂಲಕವೇ ಚಿತ್ರತಂಡಕ್ಕೆ ಕಂಬಳದ ತರಬೇತಿ ನೀಡಲಾಗಿತ್ತು. ಪರಮೇಶ್ವರ ಭಟ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಅವರು ಅಪ್ಪು ಕೋಣದ ಆರೈಕೆ ಮಾಡುತ್ತಿದ್ದರು.
ಮೃತ ಅಪ್ಪು ಕೋಣ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ, ಕಂಬಳದ ಕಣದಲ್ಲಿಯೂ ಚಾಂಪಿಯನ್ ಆಗಿ ಗುರುತಿಸಿಕೊಂಡಿತ್ತು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿತ್ತು. ಕುಂದಾಪುರ ಭಾಗದಲ್ಲಿ ನಡೆದ ಕಂಬಳಗಳಲ್ಲಿ ಸತತ ಐದು ವರ್ಷಗಳ ಕಾಲ ಚಾಂಪಿಯನ್ ಆಗಿದ್ದ ಅಪ್ಪು, ಬೆಂಗಳೂರಿನಲ್ಲಿ ನಡೆದ ಕಂಬಳದ ಕನೆಹಲಗೆ ವಿಭಾಗದಲ್ಲೂ ಪ್ರಥಮ ಪ್ರಶಸ್ತಿ ಪಡೆದಿತ್ತು. ಕರಾವಳಿಯ ಹಲವು ಕಂಬಳಗಳಲ್ಲಿ ಈ ಕೋಣ ಕೀರ್ತಿ ಬಹುಮಾನ ಸಂಪಾದಿಸಿತ್ತು. ಅಪ್ಪು ಕೋಣದ ನಿಧನದಿಂದಾಗಿ ಕಂಬಳ ಜಗತ್ತು ಒಬ್ಬ ಚಾಂಪಿಯನ್ ಅನ್ನು ಕಳೆದುಕೊಂಡಂತಾಗಿದೆ.ಅಪ್ಪುವಿನ ಅಂತ್ಯಕ್ರಿಯೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.