
ಹೆಜಮಾಡಿ: ಏಳೂರು ಮೊಗವೀರ ಮಹಾಸಭಾದಿಂದ ಸಮುದ್ರ ಪೂಜೆ
ಹೆಜಮಾಡಿ: ಏಳೂರು ಮೊಗವೀರ ಮಹಾಸಭಾ ಆಯೋಜನೆಯಲ್ಲಿ ಕನ್ನಂಗಾರು ಮೊಗವೀರ ಸಭಾ ಸಹಕಾರದಲ್ಲಿ ಹೆಜಮಾಡಿಯ ಅಮಾಸೆಕರಿಯ ಸಮುದ್ರ ಕಿನಾರೆಯಲ್ಲಿ ಶನಿವಾರ ಬೆಳಿಗ್ಗೆ ಸಾಮೂಹಿಕ ಸಮುದ್ರ ಪೂಜೆ ನಡೆಸಿ ಸಮುದ್ರಕ್ಕೆ ಹಾಲೆರೆಯಲಾಯಿತು.
ಹೆಜಮಾಡಿ ವೀರ ಮಾರುತಿ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಂದ ಹಾಲು, ತೆಂಗಿನಕಾಯಿ ಹೂಗಳನ್ನು ಭಜನಾ ಮೆರವಣಿಗೆಯೊಂದಿಗೆ ಹೆಜಮಾಡಿ ಅಮಾಸೆಕರಿಯ ಸಮುದ್ರ ಕಿನಾರೆಗೆ ತರಲಾಯಿತು.ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮುದ್ರ ರಾಜನಿಗೆ ಹಾಲೆರೆಯಲಾಯಿತು.
ಈ ಬಗ್ಗೆ ಏಳೂರು ಮೋಗವೀರ ಮಹಾಸಭಾದ ಅಧ್ಯಕ್ಷ ಎಸ್ ದಿವಾಕರ ಹೆಜಮಾಡಿಯವರು ಮಾಧ್ಯಮಕ್ಕೆ ಮಾಹಿತಿ ನೀಡಿ ,ಇವತ್ತು ನಾವು ಮೀನುಗಾರ ಬಾಂಧವರು ಎಲ್ಲರೂ ಸೇರಿ ಸಮುದ್ರ ಪೂಜೆ ಮಾಡಿದ್ದೇವೆ. ಅನಾದಿಕಾಲದಿಂದಲೂ ನಾವು ಅಮಾಸಿಕೆರೆಯ ಸಮುದ್ರಕ್ಕೆ ಪೂಜಿ ಸಲ್ಲಿಸುವುದು ನಡೆದುಕೊಂಡು ಬಂದ ಪದ್ಧತಿ.ಅದರಂತೆ ನಮಗೆ ಅನ್ನ ನೀಡುವ ತಾಯಿ ಸಮುದ್ರಕ್ಕೆ ಪೂಜಿ ಸಲ್ಲಿಸಿದ್ದೇವೆ.ಸಮುದ್ರದಲ್ಲಿ ಮೀನುಗಾರರಿಗೆ ಯಾವುದೇ ಅವಘಡಗಳು ಸಂಭವಿಸದೆ ಇರಲಿ ಎಂಬ ಕಾರಣಕ್ಕೆ ಸಮುದ್ರ ಪೂಜೆ ನಡೆಸುತ್ತಾ ಬಂದಿದ್ದೇವೆ. ಈ ವರ್ಷದ ಮೀನುಗಾರಿಕೆ ಸಂಪತ್ಭರಿತವಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭ ಏಳೂರು ಮೋಗವೀರ ಮಹಾಸಭಾ ಉಪಾಧ್ಯಕ್ಷ ಬಾಲಕೃಷ್ಣ ಸುವರ್ಣ, ಕಾರ್ಯದರ್ಶಿ ಲಲಿತ್ ಕುಮಾರ್ ಕೋಶಾಧಿಕಾರಿ ಶ್ರೇಯಸ್ ಸಾಲ್ಯಾನ್, 16 ಪಟ್ಲ ಮೊಗವೀರ ಮಹಾಸಭಾದ ಅಧ್ಯಕ್ಷ ರವಿ ಎಸ್ ಕುಂದರ್ ಹಾಗೂ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಉಪಸ್ಥಿತರಿದ್ದರು.