
ಕಾಶ್ಮೀರ: ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ : ಇಬ್ಬರು ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಲಾಮ್‌ನಲ್ಲಿ ಆಪರೇಷನ್ ಅಖಾಲ್ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ 9ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ರಾತ್ರಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿ ಹಲವು ಸೈನಿಕರಿಗೆ ಗಾಯಗಳಾಗಿವೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ನಿಖರ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಆಗಸ್ಟ್ 1ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಈವರೆಗೆ ಐದು ಉಗ್ರರನ್ನು ಹೊಡೆದುರುಳಿಸಲಾಗಿದೆ. ಸೇನಾ ಮೂಲಗಳ ಪ್ರಕಾರ, ಕನಿಷ್ಠ ಮೂವರು ಉಗ್ರರು ಇನ್ನೂ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದು, ನೈಸರ್ಗಿಕ ಗುಹೆಗಳನ್ನು ಆಶ್ರಯವಾಗಿ ಬಳಸುತ್ತಿದ್ದಾರೆ.ಉಗ್ರರಿರುವ ಸ್ಥಳವನ್ನು ಸುತ್ತುವರಿಸಿರುವ ಭದ್ರತಾ ಪಡೆಗಳು, ಡೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳ ನೆರವಿನಿಂದ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಅಡಗಿರುವ ಉಗ್ರರನ್ನು ನಿರ್ಮೂಲನೆ ಮಾಡಲು ಪ್ಯಾರಾ ಕಮಾಂಡೋಗಳು ಸಹ ಪಾಲ್ಗೊಂಡಿದ್ದಾರೆ. ಎಚ್ಚರಿಕೆ ಕ್ರಮವಾಗಿ ಅಖಾಲ್ ಗ್ರಾಮದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.