
ನವದೆಹಲಿ:ಮತಗಳ್ಳತನ ಆರೋಪ- ಐಎನ್‌ಡಿಐಎ ಒಕ್ಕೂಟದದಿಂದ ಬೃಹತ್ ಪ್ರತಿಭಟನೆ
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಮೂಲಕ ಮತ ಕಳವು ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಆ. 11ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಐಎನ್‌ಡಿಐಎ ಒಕ್ಕೂಟದ ಸದಸ್ಯರು ಸಂಸತ್ತಿನಿಂದ ಚುನಾವಣ ಆಯೋಗದ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಬೆಳಗ್ಗೆ ಸುಮಾರು 11.30ರ ವೇಳೆಗೆ ಮೆರವಣಿಗೆ ಆರಂಭವಾಗಲಿದ್ದು, ಉಭಯ ಸದನಗಳ 300ರಷ್ಟು ವಿಪಕ್ಷ ಸಂಸದರು ಪಾಲ್ಗೊಳ್ಳುವ ಸಾಧ್ಯತೆಯಿದೆ. ರ್ಯಾಲಿಯ ಬಳಿಕ ಒಕ್ಕೂಟದ ಸಂಸದರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಔತಣಕೂಟ ಆಯೋಜಿಸಿದ್ದಾರೆ.
ಕಳೆದ ವಾರ ರಾಹುಲ್ ಗಾಂಧಿ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ವಿಪಕ್ಷ ನಾಯಕರು ಬಿಜೆಪಿಯ 'ಮತ ಕಳವು ' ವಿರುದ್ಧ ಹೋರಾಡಲು ನಿರ್ಧರಿಸಿದ್ದರು. ಈ ಸಭೆಯಲ್ಲಿ ಖರ್ಗೆ, ಸೋನಿಯಾ ಗಾಂಧಿ, ಶರದ್ ಪವಾರ್, ಫಾರೂಖ್ ಅಬ್ದುಲ್ಲಾ ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ ಸಹಿತ 25 ವಿಪಕ್ಷಗಳ ನಾಯಕರು ಭಾಗವಹಿಸಿದ್ದರು. ಈಗ ಖರ್ಗೆ ಔತಣಕೂಟ ಏರ್ಪಡಿಸಿದ್ದಾರೆ. ಈ ಮೂಲಕ ಚುನಾವಣಾ ಅಕ್ರಮ ಆರೋಪ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶವನ್ನು ಹೊಂದಲಾಗಿದೆ.