
ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ರಾಜ್ಯದ ಪದವಿ ಪಠ್ಯಕ್ರಮಗಳನ್ನು ಪರಿಸ್ಕರಣೆ ಮಾಡಿ- ಪರಿಷತ್ ನಲ್ಲಿ ಡಾ.ಧನಂಜಯ ಸರ್ಜಿ ಒತ್ತಾಯ
ಬೆಂಗಳೂರು : ರಾಜ್ಯದ ಪದವಿ ಪಠ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಮರ್ಪಕವಾದ ವಿಷಯಗಳು ಒಳಗೊಂಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾದರು ಆಯ್ಕೆಯಾಗುವ ಅಭ್ಯರ್ಥಿಗಳು ಅತಿವಿರಳ ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ರಾಜ್ಯದ ಪದವಿ ಪಠ್ಯಕ್ರಮಗಳನ್ನು ಪರಿಸ್ಕರಣೆ ಮಾಡುವಂತೆ ಸದನದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ಅವರಿಗೆ ಮನವಿ ಮಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ತೆಗೆದು ಸರ್ಕಾರಿ ಕೆಲಸಗಳನ್ನು ತೆಗೆದುಕೊಳ್ಳಬೇಕೆಂದು ಲಕ್ಷಾಂತರ ಅಭ್ತರ್ಥಿಗಳು ಕನಸು ಕಂಡಿರುತ್ತಾರೆ, ಆ ಕನಸನ್ನು ನನಸು ಮಾಡಿಕೊಳ್ಳಲು ಸುಮಾರು ಹಣವನ್ನು ಖರ್ಚು ಮಾಡಿ ಬೆಂಗಳೂರು, ವಿಜಯಪುರ, ಧಾರವಾಡದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೋಚಿಂಗ್ ಸೇರಿಕೊಂಡು ಹಗಲು ರಾತ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಿ ಎ, ಬಿ ಎಸ್ ಸಿ, ಬಿ ಕಾಂ ಪದವೀಧರ ಪಠ್ಯ ಕ್ರಮ ಮತ್ತು ಯುಪಿಎಸ್ ಸಿ ಮತ್ತು ಎಸ್ ಎಸ್ ಸಿ ಮತ್ತು ಬ್ಯಾಂಕಿಂಗ್, ರೈಲ್ವೇಸ್ , ಕೆಪಿಎಸ್ ಸಿ, ಕೆಇಎ, ಮುಂತಾದ ರಾಜ್ಯ ಹಾಗೂ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮದ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ. ನಮ್ಮ ಪದವಿಪೂರ್ವ ಪಠ್ಯಕ್ರಮವು ಮುಖ್ಯವಾಗಿ ಶೈಕ್ಷಣಿಕ ಮತ್ತು ಸಿದ್ದಾಂತಧಾರಿತವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳು ಮಾನಸಿಕ ಸಾಮರ್ಥ್ಯ, ತಾರ್ಕಿಕತೆ ಪ್ರಚಲಿತ ಘಟನೆಗಳು ಇಂಗ್ಲೀಷ್ ವ್ಯಾಕರಣ ಹಾಗೂ ಕಂಪ್ಯೂಟರ್ ಜ್ಞಾನವನ್ನು ಕೇಳುತ್ತೇವೆ- ಇವುಗಳಲ್ಲಿ ಯಾವುದೂ ನಮ್ಮ ಪ್ರಸ್ತುತ ಪದವಿ ಪಠ್ಯಕ್ರಮದಲ್ಲಿ ಸಮರ್ಪಕವಾಗಿ ಒಳಗೊಂಡಿಲ್ಲ ಎಂದು ಹೇಳಿದರು.
ಈ ವ್ಯತ್ಯಾಸದಿಂದ ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬ್ಯಾಂಕಿಂಗ್ ಎಸ್ ಎಸ್ ಸಿ ಹಾಗೂ ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಸೇರುವ ಪ್ರಮಾಣ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಗಿಂತ ತುಂಬಾ ಕಡಿಮೆ ಇರಲು ಪ್ರಮುಖ ಕಾರಣವಾಗಿದೆ.
2024ರಲ್ಲಿ ನಡೆದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ದೆಹಲಿಯ 589, ಹರಿಯಾಣದ 292, ತಮಿಳುನಾಡಿನ 119, ಬಿಹಾರದ 80 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಆದರೆ ಕರ್ನಾಟಕದಿಂದ ಕೇವಲ 40 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿರುತ್ತಾರೆ.
ಒಂದು ಅಂಕಿ ಅಂಶ ಹೇಳಬೇಕಾದರೆ ಕೇಂದ್ರದ ಗ್ರೂಪ್ ಬಿ ಮತ್ತು ಸಿ ನೇಮಕಾತಿಗಳಲ್ಲಿ
2022ರಲ್ಲಿ 20,000 ಹುದ್ದೆ
2023ರಲ್ಲಿ 7,500 ಹುದ್ದೆ
2024ರಲ್ಲಿ 17,727 ಹುದ್ದೆ,
2025ರಲ್ಲಿ14,582 ಹುದ್ದೆ ಸೃಷ್ಟಿಯಾಗಿವೆ.
ಇದರ ಪ್ರಕಾರ ಕರ್ನಾಟಕದಲ್ಲಿ ವರ್ಷಕ್ಕೆ ಸೃಷ್ಟಿಯಾಗುವ ಹುದ್ದೆಗಳ ಸಂಖ್ಯೆ 2000 ಆಗಿದ್ದು, ಕೇಂದ್ರದಲ್ಲಿ ಅತೀ ಹೆಚ್ಚು ಹುದ್ದೆಗಳು ಸೃಷ್ಟಿಯಾಗುತ್ತಿರುವುದರಿಂದ ರಾಜ್ಯದ ಅಭ್ಯರ್ಥಿ ಗಳಿಗೆ ಸ್ಪರ್ಧೆ ಮಾಡಲಾಗದೆ ಇಲ್ಲಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ನಮ್ಮ ಪದವಿ ಪಠ್ಯ ಕ್ರಮ ಮತ್ತು ಪರೀಕ್ಷಾ ಕ್ರಮ ವ್ಯತ್ಯಾಸವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಮಹಾದಾಸೆಯಿಂದ ಹಗಲಿರುಳೆನ್ನೆದೆ ವ್ಯಾಸಂಗ ಮಾಡುತ್ತಿರುತ್ತಾರೆ, ಆದರೆ ಕೆಪಿಎಸ್ ಸಿ ಹಲವು ಬಾರಿ 2 ರಿಂದ 4 ವರ್ಷಗಳವರೆಗೆ ವಿಳಂಬವಾಗುತ್ತವೆ, ಇದರಿಂದ ಅನೇಕ ಅರ್ಹ ಅಭ್ಯರ್ಥಿಗಳು ವಯೋಮಿತಿಯನ್ನು ದಾಟಿ ನ್ಯಾಯ ಸಮ್ಮತ ಅವಕಾಶವನ್ನೆ ಕಳೆದುಕೊಳ್ಳುತ್ತಾರೆ. ಇದಕ್ಕೆ ವಿರುದ್ದವಾಗಿ ಸ್ಟಾಪ್ ಸೆಲಕ್ಷನ್ ಕಮಿಷನ್ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು 8 ರಿಂದ 12 ತಿಂಗಳೊಳಗೆ ಪೂರ್ಣಗೊಳಿಸಿ ಸಮಯಕ್ಕೆ ತಕ್ಕಂತೆ ಉದ್ಯೋಗವಕಾಶಗಳನ್ನು ಒದಗಿಸುತ್ತಿದೆ. ಆದ್ದರಿಂದ ವಿಳಂಬ ಅವಕಾಶ ನೀಡದೆ ಅಭ್ಯರ್ಥಿಗಳಿಗೆ ಉಪಯೋಗವಾಗುವಂತೆ ಕ್ರಮ ವಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಸದನದ ಇತರೆ ಸದಸ್ಯರು ಕೂಡ ಧ್ವನಿಗೂಡಿಸಿ ಇದಕ್ಕೆ ಶಿಕ್ಷಣ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಹೇಳಿದರು.