
ಬೆಂಗಳೂರು:ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ನನ್ನ ಕಾರ್ಯಕರ್ತರಿಗೆ, ಪಕ್ಷದ ನಾಯಕರಿಗೆ ಕ್ಷಮೆ ಕೇಳುತ್ತೇನೆ- ಡಿ ಕೆ ಶಿವಕುಮಾರ್
ಬೆಂಗಳೂರು: ನಾನು ತಪ್ಪು ಮಾಡಿಲ್ಲ. ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ನನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ, ಪಕ್ಷದ ನಾಯಕರಿಗೆ, ಇಂಡಿಯಾ ಕೂಟದ ನಾಯಕರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ಇಂದು ಡಿಕೆಶಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.ನಾನು ಯಾರಿಗೂ ಹೆದರಿಲ್ಲ ಮತ್ತು ಹೆದರಿ ಕ್ಷಮೆ ಕೇಳುತ್ತಿಲ್ಲ. ಪಾಸಿಂಗ್ ರೆಫರೆನ್ಸ್ ನಲ್ಲಿ ಆ ಹಾಡು ಹೇಳಿದ್ದೇನೆ. ಪಕ್ಷದ ನನ್ನ ನಿಷ್ಠೆ ಯಾರೂ ಪ್ರಶ್ನೆ ಮಾಡೋದು ಬೇಡ. ಅದನ್ನು ಪ್ರಶ್ನೆ ಮಾಡಿದ್ರೆ ಅವರು ಮೂರ್ಖರು ಎಂದು ಹೇಳಿದರು.
ನಾನು ಹುಟ್ಟು ಕಾಂಗ್ರೆಸಿಗ ಮತ್ತು ಸಾಯೋದು ಕಾಂಗ್ರೆಸ್‌ನಲ್ಲೇ. ನನ್ನ ಧರ್ಮ ನಾನು ಬಿಡಲು ತಯಾರು ಇಲ್ಲ. ನಾನು ಈ ಧರ್ಮದಲ್ಲಿ ಹುಟ್ಟಿದ್ದೇನೆ. ಅದೆ ಎಲ್ಲಾ ಧರ್ಮಗಳ ಮೇಲೆ ನಂಬಿಕೆ ಇದೆ ಎಂದು ತಿಳಿಸಿದರು.ಆರ್‌ಎಸ್ ಗೀತೆ ಹಾಡಿದ ವಿಚಾರದಲ್ಲಿ ರಾಜಕೀಯ ಮಾಡುವವರು ಮಾಡಲಿ. ಇಲ್ಲಿಗೆ ಈ ವಿಚಾರ ತೆರೆ ಎಳೆಯೋಣ. ರಾಹುಲ್ ಗಾಂಧಿ ಏನೂ ಕೇಳಿಲ್ಲ.ಯಾರೂ ಕೇಳಿಲ್ಲ. ಯಾರೂ ಮಾತನಾಡಿಲ್ಲ ಎಂದು ತಿಳಿಸಿದರು.
ಪಕ್ಷದಲ್ಲಿ ವಿರೋಧ ಮಾಡಿರೋದು ನನ್ನ ಹಿತೈಷಿಗಳಾಗಿದ್ದು ಅವರ ಸಲಹೆ ಪಡೆಯೋಣ. ಹರಿಪ್ರಸಾದ್ ಅವರ ಸಲಹೆ ಪಡೆಯುತ್ತೇನೆ. ಇಲ್ಲಿಗೆ ಬರುವ ಮುನ್ನ ಮಂಜುನಾಥನ ಬೊಟ್ಟು ಇಟ್ಟುಕೊಂಡಿದ್ದೇನೆ. ಬೆಳಗ್ಗೆ ಎದ್ದರೆ ಅಜ್ಜಯ್ಯ ನೋಡ್ತೀನಿ. ಫಾದರ್, ಮೌಲ್ವಿಗಳನ್ನು ಭೇಟಿಯಾಗುತ್ತೇನೆ. ನಾನು ಜಾತ್ಯಾತೀತ ವ್ಯಕ್ತಿ ಎಂದರು.