
ಬ್ರಹ್ಮಾವರ: ತಿಮರೋಡಿ ಜಾಮೀನು ಅರ್ಜಿ ತಿರಸ್ಕೃತ , 14 ದಿನಗಳ ನ್ಯಾಯಾಂಗ ಬಂಧನ
ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಇಂದು ಬ್ರಹ್ಮಾವರದ ತಾಲೂಕು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಮಹೇಶ್ ತಿಮರೋಡಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಬ್ರಹ್ಮಾವರ ತಾಲೂಕು ನ್ಯಾಯಾಲಯ ಆದೇಶ ಮಾಡಿದೆ.
ಇದಕ್ಕೂ ಮುನ್ನ ತಾಲೂಕು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಅಲ್ಲಿ ಆರೋಗ್ಯ ತಪಾಸಣೆ ನಡೆಸಿದರು.ಕೆಲವು ದಿನಗಳ ಹಿಂದೆ ತಿಮರೋಡಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಅವಹೇಳನ ಮಾಡಿದ್ದರು.ಈ ಸಂಬಂಧ ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಬೆಳಿಗ್ಗೆ ಉಜಿರೆಯ ತಿಮರೋಡಿ ನಿವಾಸಕ್ಕೆ ತೆರಳಿದ್ದ ಬ್ರಹ್ಮಾವರ ಪೊಲೀಸರು ಅವರನ್ನು ವಶಕ್ಕೆ ಪಡೆದು ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆತಂದಿದ್ದರು.ತಿಮರೋಡಿ ಬಂಧನ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಶುಕ್ರವಾರ ಮಧ್ಯಾಹ್ನ ಒಂದು ಗಂಟೆವರೆಗೆ ಪೊಲೀಸ್ ಠಾಣೆ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದೀಗ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.