
ಉಡುಪಿ: ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡಕ್ಕೆ ವಲ್ಲರೀ ಪೆಜತ್ತಾಯ ರಾವ್ ಫಿಸಿಯೋ ಆಗಿ ಆಯ್ಕೆ
ಉಡುಪಿ: ಇಪ್ಪತ್ತರ ಒಳಗಿನ ಹರೆಯದ ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡವು ಏಷ್ಯಾ ಕಪ್ ಪೂರ್ವ ಸಿದ್ಧತೆಗಾಗಿ ಬೆಂಗಳೂರಿನ ತರಬೇತಿ ಶಿಬಿರದಿಂದ ಉಜ್ಬೇಕಿಸ್ತಾನಕ್ಜೆ ಪಯಣಿಸಿದ್ದು ಉಡುಪಿ ಮೂಲದ ಶ್ರೀಮತಿ ವಲ್ಲರೀ ಪೆಜತ್ತಾಯ ರಾವ್ ಫಿಸಿಯೊ ಆಗಿ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮುಂದಿನವರ್ಷ 2026ರಲ್ಲಿ ಥೈಲ್ಯಾಂಡಿನಲ್ಲಿ ಜರುಗಲಿರುವ ಏಷಿಯಾ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅರ್ಹತೆ ಗಳಿಸಲು ಭಾರತೀಯ ಸ್ತ್ರೀಯರ ತಂಡವು ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರನಲ್ಲಿ ನಡೆಯಲಿರುವ ಅರ್ಹತಾ ಪಂದ್ಯದಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡಬೇಕಾದ ಅನಿವಾರ್ಯತೆ ಇದೆ.ಈ ಪ್ರಯುಕ್ತ ತಂಡವು ಹೆಚ್ಚಿನ ಗುಣಮಟ್ಟದ ತರಬೇತಿ, ದೈಹಿಕಕ್ಷಮತೆ,ಕೌಶಲ್ಯಹಾಗೂ ತಂತ್ರಗಾರಿಕೆ ಒಳಗೊಂಡಂತೆ ಸರ್ವಸಿದ್ಧತೆಗಾಗಿ ಉಜ್ಬೇಕಿಸ್ತಾನದ ತಾಷ್ಕೆಂಟನಲ್ಲಿ ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.
ತರಬೇತಿಯ ಜೊತೆಗೆ ಉಜ್ಬೇಕಿಸ್ತಾನದ ವಿರುದ್ಧ ಆಯೋಜನೆಗೊಂಡ ಎರಡು ಸೌಹಾರ್ದ ಪಂದ್ಯಾಟದಲ್ಲಿ ಭಾರತದ ಸ್ತ್ರೀಯರ ಫುಟ್ಬಾಲ್ ತಂಡವು ಮೊದಲ ಪಂದ್ಯದಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿತು.ಎರಡನೇ ಪಂದ್ಯದಲ್ಲಿ ಬಲಿಷ್ಠ ಉಜ್ಬೇಕಿಸ್ತಾನದ ವಿರುದ್ಧ 4-1ಅಂತರದಲ್ಲಿ ರೋಚಕ ವಿಜಯವನ್ನು ದಾಖಲಿಸಿತು.
ಆಗಸ್ಟ್ ತಿಂಗಳಲ್ಲಿ 20ರ ಕೆಳಹರೆಯದ ಭಾರತೀಯ ಸ್ತ್ರೀಯರ ತಂಡವು ಇಂಡೋನೇಷಿಯಾ,ತುರ್ಕಮೆನಿಸ್ತಾನ್ ಹಾಗೂ ಮ್ಯಾನ್ಮಾರ್ ಜೊತೆ ಅಧಿಕೃತ ಪಂದ್ಯಗಳನ್ನು ಆಡಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತನ್ನ ವರದಿಯಲ್ಲಿ ಪ್ರಕಟಿಸಿದೆ.
ಒಟ್ಟು 24 ಸದಸ್ಯರನ್ನು ಹೊಂದಿರುವ 20ರ ಒಳಗಿನ ಹರೆಯದ ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡವು ಅತ್ಯಂತ ಪ್ರತಿಭಾವಂತ ಆಟಗಾರನ್ನು ಹೊಂದಿದ್ದು ತಂಡಕ್ಕೆ ವಿಶೇಷ ಶಕ್ತಿಯಾಗಿ ಜಾಗತಿಕಮಟ್ಟದಲ್ಲಿ ಫುಟ್ಬಾಲ್ ಆಟದಲ್ಲಿ ಭಾರಿ ಪ್ರಸಿದ್ಧಿಯನ್ನು ಹೊಂದಿರುವ ಸ್ವೀಡನಿನ ಜೋಕೀಂ ಅಲೆಕ್ಸಾಂಡರ್ಸನ್ ರವರು ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದ್ದಾರೆ. ಅಂತೆಯೇ ಉಡುಪಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀವಾದಿರಾಜ ಹಾಗೂ ಸಹನಾ ಪೆಜತ್ತಾಯರ ಸುಪುತ್ರಿ ಮತ್ತು ಡಾ.ವಿಶಾಕ್ ರಾವ್ ಪತ್ನಿ ಶ್ರೀಮತಿ ವಲ್ಲರಿ ಪೆಜತ್ತಾಯ ರಾವ್ ಈ ಫುಟ್ಬಾಲ್ ತಂಡದ ದೈಹಿಕಕ್ಷಮತಾ ತಜ್ಞರಾಗಿ (ಫಿಸಿಯೊ)ತಂಡದ ಜೊತೆಗಿದ್ದಾರೆ ಎನ್ನುವುದು ಕರಾವಳಿಯ ಕನ್ನಡಿಗರಿಗೆ ಅತ್ಯಂತ ಪ್ರತಿಷ್ಠೆ ಹಾಗೂ ಹೆಮ್ಮೆಯ ವಿಚಾರ.