ಉಪರಾಷ್ಟ್ರಪತಿ: ಪ್ರಶ್ನೆಗಳು ಏಳಬೇಕಾದದ್ದು ಎಲ್ಲಿ? ರಾಜಾರಾಂ ತಲ್ಲೂರು ಬರಹ

ಉಪರಾಷ್ಟ್ರಪತಿ: ಪ್ರಶ್ನೆಗಳು ಏಳಬೇಕಾದದ್ದು ಎಲ್ಲಿ? ರಾಜಾರಾಂ ತಲ್ಲೂರು ಬರಹ

 

ಶಾಸಕಾಂಗದಲ್ಲಿ ಪಕ್ಷ ರಾಜಕೀಯವನ್ನು ಮೀರಿದ ಮೂರು ಸಾಂವಿಧಾನಿಕ ಹುದ್ದೆಗಳೆಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಲೋಕಸಭೆಯ ಸ್ಪೀಕರ್ ಅವರದು. ಬರಬರುತ್ತಾ 75 ವರ್ಷಗಳಲ್ಲಿ, ಈ ಮೂರು ಸಂವಿಧಾನದ “ಸ್ಪಿರಿಟ್” ರಕ್ಷಕ ಹುದ್ದೆಗಳ “ಘನತೆ” ಎಲ್ಲಿಗೆ ತಲುಪಿದೆ ಎಂಬುದು ಅರ್ಥವಾಗುವುದು ಪಕ್ಷ ರಾಜಕೀಯ ಬಿಟ್ಟು ಯೋಚಿಸತೊಡಗಿದಾಗ ಮಾತ್ರ.

ಮೊನ್ನೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ರಾಜೀನಾಮೆಯ ಬಳಿಕ ಪ್ರಶ್ನೆಗಳು ಎಲ್ಲಿ ಏಳಬೇಕಿತ್ತೋ ಅಲ್ಲಿ ಏಳದಿದ್ದಾಗ, ಈ “ಘನತೆ”ಯ ಪ್ರಶ್ನೆ ಸಹಜವಾಗಿಯೇ ಏಳಬೇಕಿತ್ತು. ನಮ್ಮ ಮಾಧ್ಯಮಗಳು ಇದನ್ನು ಹೇಗೆ ಬಿಂಬಿಸುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? “ಸರ್ಕಾರದ ಮಾತು ಕೇಳದ ಕಾರಣಕ್ಕೆ” ಧನ್ಕರ್ ತಲೆದಂಡ ಆಗಿದೆ ಎಂಬುದು ಬಹುತೇಕ ಎಲ್ಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳ ಒಟ್ಟು ಸಾರಾಂಶ. 

ಆಗ ಸಹಜವಾಗಿ ಏಳಬೇಕಾಗಿದ್ದ ಪ್ರಶ್ನೆ, ಹಿರಿಯರ ಸದನದ ಅಧ್ಯಕ್ಷೀಯ ಪೀಠವನ್ನು ಅಲಂಕರಿಸಿರುವ ಉಪರಾಷ್ಟ್ರಪತಿಗಳ ಹುದ್ದೆ ಸರ್ಕಾರದ ಮಾತು ಕೇಳಿಕೊಂಡು ಸಂಸತ್ತಿನ ಹಿರಿಯರ ಸದನವನ್ನು ನಡೆಸುವುದಕ್ಕಾಗಿ ಇರುವ ಸರ್ಕಾರದ ಸೇವಕರ ಹುದ್ದೆಯೇ ಅಥವಾ ಸಂವಿಧಾನದ ಘನತೆಯ ರಕ್ಷಕರ ಹುದ್ದೆಯೆ?!

ಸರ್ಕಾರ ನಡೆಸುತ್ತಿರುವ ಪಕ್ಷವು ಹಿರಿಯರ ಸದನದ, ಸದನ ಕಲಾಪ ಸಲಹಾಸಮಿತಿ (BAC) ಬೆಳಗ್ಗೆ ಸೇರಿದ ಬಳಿಕ ಮಧ್ಯಾಹ್ನ ಮತ್ತೆ ಸೇರುವಾಗ ಸದನ ನಾಯಕರು (ನಡ್ಡಾ), ಮತ್ತು  ಸಂಸದೀಯ ವ್ಯವಹಾರ ಸಚಿವರು (ರಿಜುಜು) ಆ ಸಭೆಗೆ ಬರಲಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು ಎಂದು ಸಮರ್ಥನೆ ಮಾಡಿಕೊಳ್ಳುತ್ತಿದೆ. ಮುಂಗಾರು ಅಧಿವೇಶನದ ಸಂಸತ್ ಕಲಾಪ ಆರಂಭ ಆಗಿರುವ ಮೊದಲ ದಿನವೇ ಅದರ ಜವಾಬ್ದಾರಿ ಹೊರಬೇಕಿರುವ ಸಂಸದೀಯ ಸಚಿವರಿಗೆ ಮತ್ತು ಸದನ ನಾಯಕರಿಗೆ ಸಂಸತ್ತಿಗಿಂತ ಮಹತ್ವದ ಕೆಲಸ ಬೇರೇನಿತ್ತು ಎಂಬುದನ್ನು ದೇಶ ತಿಳಿಯುವುದು ಬೇಡವೆ? ಸಂಸತ್ತು ಎಂದರೆ ಪುರುಸೊತ್ತಿದ್ದಾಗ ಬಂದು ಮುಖ ತೋರಿಸಿ ಹೋಗುವ “ಕ್ಲಬ್” ಎಂದು ಈ ಜನಪ್ರತಿನಿಧಿಗಳು ತಿಳಿದಿದ್ದಾರೆಯೆ?

ಇದಲ್ಲದೇ ಮಾಧ್ಯಮಗಳಲ್ಲಿ ಬಿಹಾರ ಚುನಾವಣೆಯ ಕಾಲಕ್ಕೆ ನಿತೀಶ್ ಅವರನ್ನು ಅಲ್ಲಿ ಕೂರಿಸುವ ಇರಾದೆ ಇದೆ ಎಂಬೆಲ್ಲ ಸ್ಪಿನ್‌ಗಳನ್ನು ಹರಿಬಿಡಲಾಗುತ್ತಿದೆ. ಇಂತಹ ವಾದಗಳೆಲ್ಲ ಉಪರಾಷ್ಟ್ರಪತಿ ಹುದ್ದೆಯ ಘನತೆಯನ್ನು ತಗ್ಗಿಸುತ್ತವೆ  ಎಂಬ ಯೋಚನೆಯೂ ಇಲ್ಲದವು. ಧನ್ಕರ್ ನಿಜಕ್ಕೂ ಆರೋಗ್ಯದ ಕಾರಣಕ್ಕೆ  ರಾಜೀನಾಮೆ ಇತ್ತಿದ್ದರೆ, ಅವರು ತಮಗೆ ಸಲ್ಲಿಸಿದ ಸೇವೆಗೆ ಋಣಿ ಆಗಿರುವುದನ್ನು ಆಡಳಿತ ಪಕ್ಷದವರ ಟ್ವೀಟ್/ಪತ್ರಿಕಾ ಹೇಳಿಕೆ ಇತ್ಯಾದಿಗಳಲ್ಲಿ ಕಾಣಬೇಕಿತ್ತು. ಅಲ್ಲಿನ ಘೋರ ಮೌನವೇ ಎಲ್ಲವನ್ನೂ ನಿಗೂಢವಾಗಿ ಬಿಚ್ಚಿಡುತ್ತಿದೆ.

ಇನ್ನು ಸ್ವತಃ ಧನ್ಕರ್ ಅವರು ಆ ಸೀಟಿಗೆ ಎಷ್ಟು ಘನತೆ ತಂದುಕೊಟ್ಟರು ಎಂಬುದನ್ನು ದೇಶವೆಲ್ಲ ನೋಡಿದೆ. ಪ. ಬಂಗಾಲದಲ್ಲಿ ರಾಜ್ಯಪಾಲರಾಗಿ ದೀದಿಗೆ ಕೊಟ್ಟ ಕಾಟವೇ ಅರ್ಹತೆಯೇನೋ ಎಂಬಂತೆ ಸಂಸತ್ತಿನ ಹಿರಿಯರ ಸದನದ ಅಧ್ಯಕ್ಷಪೀಠ ಏರಿದವರು ಅವರು. ಅವರ ಅವಧಿಯಲ್ಲಿ ಪಕ್ಷಪಾತದ ವ್ಯಾಖ್ಯೆ ಹೇಗೆ ಬದಲಾಯಿತು ಎಂಬುದನ್ನೂ ನೋಡಿದ್ದೇವೆ. ಈಗ “ಅನ್ ಸೆರೆಮೋನಿಯಸ್” ಆಗಿ ಅವರನ್ನು ಹೊರತೆರಳುವಂತೆ ಮಾಡಲಾಗಿದೆ.

ಖಾಲಿಯಾದ ಉಪರಾಷ್ಟ್ರಪತಿ ಹುದ್ದೆ ಇಂತಿಷ್ಟೇ ದಿನಗಳಲ್ಲಿ ಭರ್ತಿ ಆಗಬೇಕೆಂದು ಸಂವಿಧಾನ ಹೇಳಿಲ್ಲ. ಹಾಗಾಗಿ, ಸದನದ ಸದಸ್ಯರಾಗಿರುವ ಉಪಸ್ಪೀಕರ್‌ಅನ್ನೇ ಅಧ್ಯಕ್ಷತೆ ವಹಿಸಲು ಹೇಳಿ, ಸಾಧ್ಯವಾದಷ್ಟೂ ದಿನ ದೂಡುವ ಸಾಧ್ಯತೆಗಳೇ ಸದ್ಯಕ್ಕೆ ಎದ್ದು ಕಾಣಿಸುತ್ತಿವೆ. ಚುನಾವಣಾ ಆಯೋಗ ಕೂಡಾ ತನ್ನ ಸಾಂವಿಧಾನಿಕ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿರ್ವಹಿಸುವುದೇ ಎಂಬ ಬಗ್ಗೆ ಆತಂಕಗಳಿವೆ. ಎರಡು ಅವಧಿಗಳಿಗೆ ವಿರೋಧ ಪಕ್ಷ ನಾಯಕರೆಂಬ ಹುದ್ದೆ ಬೇಕಿಲ್ಲ ಎಂದು ಸರ್ಕಾರ ತೋರಿಸಿಕೊಟ್ಟಿದೆ. ಕಾನೂನನ್ನು ಕೇವಲ "ಇನ್ ಲೆಟರ್" ಪಾಲನೆ ಮಾಡಿ, "ಇನ್ ಸ್ಪಿರಿಟ್" ಅದನ್ನು ತೂರಿಬಿಡುವುದು ದೇಶ ನಡೆಸುವವರಿಗೀಗ ಅಭ್ಯಾಸ ಆದಂತಿದೆ.

Ads on article

Advertise in articles 1

advertising articles 2

Advertise under the article