
ಶಿರ್ವ: ಕುಖ್ಯಾತ ಅಂತಾರಾಜ್ಯ ಕಳ್ಳ "ಇತ್ತೆ ಬರ್ಪೆ ಅಬೂಬಕರ್" ಬಂಧನ - ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
ಶಿರ್ವ: ಕುಖ್ಯಾತ ಅಂತಾರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕರ್ ಎಂಬಾತನನ್ನು ಬಂಧಿಸಿರುವ ಶಿರ್ವ ಪೊಲೀಸರು, ಆತನಿಂದ 7,50,000 ರೂ. ಮೌಲ್ಯದ ಒಟ್ಟು 66.760ಗ್ರಾಂ ಚಿನ್ನಾಭರಣ ಮತ್ತು ಕೃತ್ಯದ ವೇಳೆ ಪ್ರಯಾಣಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟಾರು ಬಬ್ಬರ್ಯ ದೈವಸ್ಥಾನದ ಬಳಿಯ ನಿವಾಸಿ ಪವಿತ್ರಾ ಪೂಜಾರ್ತಿ ಅವರ ಮನೆಗೆ ಜೂ. 27ರಂದು ರಾತ್ರಿ ಮನೆಯಯೊಳಗೆ ಪ್ರವೇಶಿಸಿದ್ದ ಕಳ್ಳರು ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ ರೂ. 12,75,000/-) ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ|ಹರ್ಷ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಕಾಫು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ ಅವರ ನೇತೃತ್ವದ ಶಿರ್ವ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಇತ್ತೆ ಬರ್ಪೆ ಅಬೂಬಕ್ಕರ್ ನನ್ನು ಬಂಧಿಸಿದ್ದಾರೆ.