
ಉಡುಪಿಯಲ್ಲಿ ಭಕ್ತಿ, ಜ್ಞಾನ, ಸೇವೆ ಮೂರೂ ಸಮ್ಮಿಳಿತವಾಗಿದೆ - ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್
ಉಡುಪಿ: ದೇಶದಲ್ಲಿ ಅಸಹಿಷ್ಣುತೆ, ಆತ್ಮ ವಿಸ್ಮೃತಿ ಭಾವನೆ ಸಮಾಜದಲ್ಲಿ ಹೆಚ್ಚುತ್ತಿದ್ದು ಯುವಜನತೆ ಭಕ್ತಿ , ಕರ್ತವ್ಯಪರತೆ ನೆಲೆಯಲ್ಲಿ ನಿರ್ಭಯ, ವಿವೇಕಶೀಲ ಕರ್ಮ ಯೋಗಿಗಳಾಗಬೇಕು ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಅವರು ಉಡುಪಿ ಶ್ರೀಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ.1ರಿಂದ ಸೆ.17ರ ತನಕ ನಡೆಯುವ ಶ್ರೀಕೃಷ್ಣ ಮಂಡಲೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶ್ರೀಕೃಷ್ಣ ಗೀತೆಯಲ್ಲಿ ಬೋಧಿಸಿದ ಜ್ಞಾನ, ಕರ್ಮ, ಭಕ್ತಿಯೋಗದಿಂದ ನಿಷ್ಕಾಮ ಭಾವ ಹೊಂದಿ ಫಲ ರಹಿತ ಚಿಂತನೆಯಿಂದ ಯಾವುದೇ ಕಾರ್ಯದಲ್ಲಿ ತೊಡಗಬೇಕು. ಆತ್ಮೋನ್ನತಿಗಾಗಿ ಜೀವನದ ಉದ್ದೇಶ ಅರಿತು ಧರ್ಮ ಪಾಲನೆ ಮಾಡಬೇಕು.
ಧರ್ಮ, ಭಕ್ತಿ, ಸತ್ಕರ್ಮದಲ್ಲಿ ಬದುಕಿನ ಸಾಫಲ್ಯವಿದೆ. ಧಾರ್ಮಿಕ ಅನುಷ್ಠಾನ, ಸಾಂಸ್ಕೃತಿಕ ಚೈತನ್ಯ, ಆಧ್ಯಾತ್ಮಿಕ ಪ್ರೇರಣೆ, ಸಾಮಾಜಿಕ ಏಕತೆಯಿಂದ ಪ್ರತಿಯೊಬ್ಬರ ಬದುಕು ಸಾರ್ಥಕ್ಯ ಹೊಂದಲು ಸಾಧ್ಯ. ಉಡುಪಿಯಲ್ಲಿ ಭಕ್ತಿ, ಜ್ಞಾನ, ಸೇವೆ ಮೂರೂ ಸಮ್ಮಿಳಿತವಾಗಿದೆ. ಆಧುನಿಕ ವಿಶ್ವದಲ್ಲಿ ವೇದಾಂತ ಪರಂಪರೆಯ ಪ್ರತಿಷ್ಠಾಪನೆಯಾಗಬೇಕು.
ಶ್ರೀಕೃಷ್ಣನ ಗೀತೋಪದೇಶ ಇಂದಿಗೂ ಪ್ರಸ್ತುತ. ಪುತ್ತಿಗೆ ಶ್ರೀಗಳು ವೇದಾಂತ, ಸನಾತನ ಧರ್ಮ ಪ್ರಚಾರದ ಜತೆಗೆ ಭಾರತೀಯತೆ ಹಾಗೂ ಭಾರತೀಯ ಸಂಸ್ಕೃತಿಯನ್ನು ವಿಶ್ವದ ಜತೆಗೆ ಜೋಡಿಸುವ ಪರಿಶ್ರಮದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಶ್ರೀಗಳು ರಾಜ್ಯಪಾಲರನ್ನು ಕಡಗೋಲು ಸಹಿತವಾಗಿ ಗೌರವಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.