
ಉಡುಪಿ: ಖುಮ್ಕಿ ಹಕ್ಕು ರದ್ದುಗೊಳಿಸಿ ದಲಿತರಿಗೆ ಭೂಮಿ ನೀಡಿ : ಶ್ಯಾಮರಾಜ್ ಬಿರ್ತಿ
ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ರಾಜ್ಯಾದ್ಯಂತ ಇಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹಾಗೂ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಅದರಂತೆ ಬ್ರಹ್ಮಾವರ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಹಿರಿಯ ಮುಖಂಡರಾದ ಅಣ್ಣಪ್ಪ ಕುಕ್ಕುಡೆ ಮತ್ತು ವಾರಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷ ಎಸ್.ನಾರಾಯಣ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಉಧ್ಘಾಟಿಸಿದರು.
ಕಾರ್ಯಕ್ರಮವನ್ನು ಉಧ್ಧೇಷಿಸಿ ಮಾತನಾಡಿದ ದ.ಸಂ.ಸ.ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ,ಈ ದೇಶದಲ್ಲಿ ಭೂಮಿಯಿಂದ ವಂಚಿತರಾದ ಸಮುದಾಯ ಒಂದಿದ್ದರೆ ಅದು ದಲಿತ ಸಮುದಾಯ. ಬಾಬಾಸಾಹೇಬರು ನಮಗೆ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂರು ಧ್ಯೇಯ ವಾಕ್ಯವನ್ನು ಕೊಟ್ಟರು .ಶಿಕ್ಷಣ ನಮಗೆ ಜ್ಞಾನದ ಸಂಪತ್ತನ್ನು ಕೊಟ್ಟರೆ ಭೂಮಿಯು ನಮಗೆ ಆರ್ಥಿಕ ಸಂಪತ್ತನ್ನು ಕೊಡುತ್ತದೆ. ಎಷ್ಟೇ ಶಿಕ್ಷಣ ಪಡೆದರೂ ಉದ್ಯೋಗ ಸಿಗದ ಈ ಕಾಲಘಟ್ಟದಲ್ಲಿ ಜೀವನೋಪಾಯಕ್ಕಾಗಿ ಭೂಮಿಯನ್ನು ಕೇಳುವುದು ಅನಿವಾರ್ಯವಾಗಿದೆ.ಭೂಮಿ ಇದ್ದರೆ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ.
ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದ್ದರೂ ಜಿಲ್ಲಾಡಳಿತ ಅದನ್ನು ಭೂರಹಿತರಿಗೆ ಹಂಚುತ್ತಿಲ್ಲ.ಹೆಚ್ಚಿನ ಡಿಸಿ ಮನ್ನಾ ಭೂಮಿಯನ್ನು ಮೇಲ್ವರ್ಗದವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣವಾದ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಭೂರಹಿತರಿಗೆ ಹಂಚಬೇಕು ಎಂದರು.
ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿರುವಾಗ ಖುದ್ದು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆಯವರೇ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಬ್ರಹ್ಮಾವರ ತಾಲೂಕು ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕಾದ ಶ್ಯಾಮಸುಂದರ್ ತೆಕ್ಕಟ್ಟೆ , ಕುಮಾರ್ ಕೋಟ , ಮಂಜುನಾಥ ಬಾಳ್ಕುದ್ರು , ತಾಲೂಕು ಸಂಚಾಲಕರಾದ ಹರೀಶ್ಚಂದ್ರ ಬಿರ್ತಿ , ಸಂಘಟನಾ ಸಂಚಾಲಕರಾದ ಶ್ರೀನಿವಾಸ ವಡ್ಡರ್ಸೆ , ಪ್ರಕಾಶ್ ಹೇರೂರು , ಸುಧಾಕರ ಮಾಸ್ತರ್ ಗುಜ್ಜರ್ ಬೆಟ್ಟು , ಬಿರ್ತಿ ಸುರೇಶ , ಪ್ರಶಾಂತ್ ಬಿರ್ತಿ , ಚೈತನ್ಯ ಬಿರ್ತಿ, ಕುಸುಮಾ ಹಂಗಾರಕಟ್ಟೆ , ಆರೂರು ಸಂಚಾಲಕರಾದ ನರಸಿಂಹ ಆರೂರು , ಶರತ್ ಆರೂರು , ಬೋಜರಾಜ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.