
ಉಡುಪಿ: ಕರಾವಳಿ ಕಮಿಷನರೇಟ್ (ಕಮಿಷನ್+ರೇಟ್) ಆಗಿದೆಯೆ?!
ಬರಹ* ರಾಜಾರಾಮ್ ತಲ್ಲೂರು (ಪತ್ರಕರ್ತ- ಅಂಕಣಕಾರ)
ಉಡುಪಿಯಲ್ಲಿ 25-30 ವರ್ಷಗಳ ಹಿಂದೆ ಲಂಚ ಇತ್ತು, ಭ್ರಷ್ಟಾಚಾರ ಇತ್ತು, ಗುತ್ತಿಗೆದಾರರ ಮಟ್ಟಿಗೆ ಪಕ್ಷಪಾತ ಇತ್ತು. ಆದರೆ, ಪರ್ಸಂಟೇಜು-ರೇಟು, ಕಮಿಷನ್ ಇತ್ಯಾದಿಗಳೆಲ್ಲ ಇದ್ದಂತಿರಲಿಲ್ಲ. ಯಾರೋ ರಾಜಕಾರಣಿ ಇಂತಿಷ್ಟು ತಗೊಂಡ್ರಂತೆ ಎಂಬ ಗಾಳಿ ಸುದ್ದಿ ಕೂಡ ಆಗೆಲ್ಲ ಇಲ್ಲಿ ಸಾಮಾಜಿಕವಾಗಿ ಬಿರುಗಾಳಿಯ ಒಳಸುಳಿಗಳನ್ನು (ಹೊರಗೆ ಪ್ರಶಾಂತವಾಗಿದ್ದರೂ) ಎಬ್ಬಿಸುತ್ತಿತ್ತು. ಜನಪ್ರತಿನಿಧಿಗಳು ಕಮಿಷನ್‌ಗೆ ಕುಮ್ಮಕ್ಕು ಕೊಡುವವರಾಗಿರಲಿಲ್ಲ ಎಂದು ಸ್ವಲ್ಪ ಧೈರ್ಯವಾಗಿಯೇ ಹೇಳಬಹುದಿತ್ತು. ಇದು ಇಲ್ಲಿ ಪತ್ರಕರ್ತನಾಗಿ ಓಡಾಡಿ ನನ್ನ ಅನುಭವ.
ಈಗ ಪರಿಸ್ಥಿತಿ ಯಾಕೋ ಬದಲಾದಂತಿದೆ. ಸಾಮಾಜಿಕ-ಸಾಂಸ್ಕೃತಿಕ ನಾಯಕತ್ವಗಳು ಬದಲಾಗಿವೆ, ರಾಜಕೀಯ ನಾಯಕತ್ವ ಬದಲಾಗಿದೆ, ಅಧಿಕಾರಿಗಳ ಧೋರಣೆ ಬದಲಾಗಿದೆ. ನಾಡಿನೆಲ್ಲೆಡೆ ಮೊದಲೆಲ್ಲ ಕೇವಲ ಕಂದಾಯ, ಗೃಹ, ಅಬ್ಕಾರಿ, ನಿರಾವರಿ ಇತ್ಯಾದಿ ಶ್ರೀಮಂತ ಇಲಾಖೆಗಳಲ್ಲಿ ಮಾತ್ರ ಇದ್ದ “ಕಮಿಷನರೇಟ್” ರೋಗವು ಈಗ “ವಿಶೇಷ ನಿಧಿಶೋಧನೆ ತಂತ್ರಗಳ” ಕಾರಣದಿಂದಾಗಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಧಾರ್ಮಿಕದತ್ತಿ...ಇಂತಹ ಬಡಪಾಯಿ ಇಲಾಖೆಗಳಿಗೂ ತಲೆಯಿಂದ ಬುಡದ ತನಕ ಒಕ್ಕರಿಸಿದಂತಿದೆ. ರಾಜಕೀಯಸ್ಥರು ತಾವೇ ಈ “ಕಮಿಷನರೇಟು”ಗಳನ್ನು ಸ್ಥಾಪಿಸಿಕೊಂಡಿದ್ದಾರೋ ಅಥವಾ ರಾಜಕೀಯಸ್ಥರ ಹೆಸರಿನಲ್ಲಿ ಅಧಿಕಾರಿಗಳ ಮಟ್ಟದಲ್ಲೇ ಈ ವ್ಯವಹಾರ ನಡೆಯುತ್ತಿದೆಯೋ... ಆಳಕ್ಕಿಳಿದೇ ನೋಡಬೇಕು.
ಬೇರೆಲ್ಲಿ ಅಲ್ಲದಿದ್ದರೂ ಸಾಮಾಜಿಕ ಸೇವೆ/ಚಾರಿಟಿಗಳಲ್ಲಿ ತೊಡಗಿರುವಲ್ಲಿ ಹಿಂದೆಲ್ಲ ಹಸ್ತಕ್ಷೇಪಗಳು ಇರಲಿಲ್ಲ. ಆದರೆ ಈಗೀಗ “ಕಮಿಷನರೇಟುಗಳು” ಬಂದ ಬಳಿಕ, “NGOಗಳು ಲಾಭ ಇಲ್ಲದೇ ಇಂತಹದರಲ್ಲಿ ತೊಡಗಿಕೊಳ್ಳುವುದಿಲ್ಲ; ಅಲ್ಲಿ ನಮಗೂ ಪಾಲು ಕೊಡಲಿ” ಎಂಬ ಮನೋಸ್ಥಿತಿಗೆ ,ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಶಾಹಿ ತಲುಪಿರುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ, ಜಿಲ್ಲೆಯಲ್ಲಿ “ಮಾನಸಧಾರಾ” ಯೋಜನೆ.
ಕಳೆದ 9 ವರ್ಷಗಳಿಂದ ಯಾವುದೇ ಅಪವಾದಕ್ಕೆ ಎಡೆ ಇರದಂತೆ “ಮಾನಸಧಾರಾ” ಯೋಜನೆ ನಡೆಸಿಕೊಂಡು ಬಂದು, ನೂರಾರು ಮಂದಿ ಅರ್ಹ ಬಡವರಿಗೆ ಆ ಯೋಜನೆಯ ಫಲವನ್ನು ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ NGO ಒಂದರ ಮುಖ್ಯಸ್ಥರಾದ, ನನ್ನ ಸ್ನೇಹಿತರೂ ಆದ ಡಾ| ಪಿ.ವಿ. ಭಂಡಾರಿ ಅವರು ಎತ್ತಿರುವ ಪ್ರಶ್ನೆಗಳು, ಕರಾವಳಿಯ ಅಧಿಕಾರಶಾಹಿಯು ಸಮಾಜದ ಕನ್ನಡಿಯಲ್ಲಿ ತನ್ನ ಮುಖವನ್ನೊಮ್ಮೆ ನೋಡಿಕೊಳ್ಳುವಂತೆ ಮಾಡುತ್ತಿದೆ.
ಭ್ರಷ್ಟತನದ ವಿರುದ್ಧ ಅವರ ಈ ಹೋರಾಟದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತರೂ ಕೈಜೋಡಿಸಬೇಕಿದೆ. ಇಲ್ಲದಿದ್ದರೆ ಇಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಉಮ್ಮಿಕಲ್ ಪರಶುರಾಮದಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ; ಕರ್ನಾಟಕದ ಬೇರೆ ಭಾಗಗಳಿಗೂ, ಬುದ್ಧಿವಂತರ ಕರಾವಳಿಗೂ ವ್ಯತ್ಯಾಸ ಉಳಿಯುವುದಿಲ್ಲ. ನಮ್ಮ ದೈಹಿಕ-ಮಾನಸಿಕ ಆರೋಗ್ಯಕ್ಕಾಗಿ ಆದರೂ ಡಾ|ಭಂಡಾರಿ ಅವರ ಜೊತೆ ನಿಲ್ಲೋಣ.
(ಡಾ.ಪಿ.ವಿ ಭಂಡಾರಿ ಅವರ ಬರಹ ನಾಳೆ ಪ್ರಕಟವಾಗಲಿದೆ)