
ಕಾರ್ಕಳ: ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಪಿತೃ ವಿಯೋಗ
17/07/2025 03:00 AM
ಕಾರ್ಕಳ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ತಂದೆ ಎಂ. ಕೆ. ವಾಸುದೇವ (87) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ಆರ್.ಎಸ್.ಎಸ್.ನಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು.ಮೃತರು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವು ಅಪರಾಹ್ನ 1 ಗಂಟೆಗೆ ಮಣಿಪಾಲದಿಂದ ನಿಟ್ಟೆ ಗ್ರಾಮದ ಕಲಂಬಾಡಿಗೆ ತರಲಾಗುವುದು. ಸಂಜೆ 4 ಗಂಟೆಗೆ ಅಂತಿಮ ವಿಧಿವಿಧಾನಗಳು ಕುಟುಂಬಸ್ಥರ ಉಪಸ್ಥಿತಿಯಲ್ಲಿ ನೆರವೇರಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.