ಉಡುಪಿ: ಗಂಗೊಳ್ಳಿಯ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ವೊಂದು ನೀರಿನ ಸುಳಿಗೆ ಸಿಲುಕಿ ಮುಳುಗಡೆಯಾದ ಘಟನೆ ಬುಧವಾರ ಸಂಭವಿಸಿದೆ.
ಬೋಟಿನಲ್ಲಿದ್ದ ಸುಮಾರು ಆರು ಮಂದಿ ಮೀನುಗಾರರನ್ನು ತಕ್ಷಣವೇ ರಕ್ಷಿಸಲಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಕಳೆದ ವಾರವಷ್ಟೇ ಇದೇ ಗಂಗೊಳ್ಳಿ ಅಳಿವೆ ಬಾಗಿಲಿನಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ಬೋಟ್‌ವೊಂದು ಸಂಪೂರ್ಣ ಮುಳುಗಡೆಯಾಗಿತ್ತು. ಆ ವೇಳೆ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿ ಬೋಟಿನಲ್ಲಿದ್ದ ಎಲ್ಲ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು.
ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಬೋಟ್ ನೀರಿನ ಸುಳಿಗೆ ಸಿಲುಕಿ ಅಪಾಯಕ್ಕೆ ಒಳಗಾಗಿರುವುದು ಸ್ಥಳೀಯ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ. ಗಂಗೊಳ್ಳಿ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕಾ ಬೋಟ್‌ಗಳ ಸಂಚಾರದ ಸುರಕ್ಷತೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
