ಹರ್ಯಾಣದ ಸೋನಿಪತ್‌ನಲ್ಲಿ ನಡೆದ ಈ ಘಟನೆ ಕೇವಲ ಒಂದು ಸುದ್ದಿಯಲ್ಲ, ಕಲ್ಲಿನಂತಾಗಿರುವ ಇಂದಿನ ಮಾನವೀಯ ಮನಸ್ಸುಗಳಿಗೆ ಹಿಡಿದ ಕನ್ನಡಿ. ಮೂಲತಃ ಮುಂಬೈನ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಅವರು ತಮ್ಮ ಇಡೀ ಜೀವನದ ಸಂಪಾದನೆ, ಶ್ರಮ ಮತ್ತು ಕಷ್ಟವನ್ನು ಮೂವರು ಹೆಣ್ಣುಮಕ್ಕಳ ಏಳಿಗೆ ಹಾಗೂ ಶಿಕ್ಷಣಕ್ಕಾಗಿ ಮುಡಿಪಾಗಿಟ್ಟಿದ್ದರು.
ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಿ, ಉತ್ತಮ ಮನೆತನಕ್ಕೆ ಮದುವೆ ಮಾಡಿ ಕೊಟ್ಟ ನಂತರ, ಆ ತಂದೆಗೆ ಉಳಿದಿದ್ದು 'ಒಂಟಿತನ'. ತಾವೇ ಸಾಕಿ ಸಲಹಿದ ಮಕ್ಕಳಿಗೆ ಕೊನೆಗಾಲದಲ್ಲಿ ಆಸರೆಯಾಗಲು ಸಾಧ್ಯವಾಗದೆ, ಕಳೆದ ಎರಡು ವರ್ಷಗಳಿಂದ ಅವರು ಸೋನಿಪತ್‌ನ ವೃದ್ಧಾಶ್ರಮವೊಂದರಲ್ಲಿ ಕಣ್ಣೀರಿಡುತ್ತಾ ದಿನ ದೂಡುತ್ತಿದ್ದರು.
!
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ವೃದ್ಧಾಶ್ರಮದ ಸಿಬ್ಬಂದಿ 20 ದಿನಗಳ ಹಿಂದೆಯೇ ಮೂವರೂ ಪುತ್ರಿಯರಿಗೆ ಮಾಹಿತಿ ನೀಡಿದ್ದರು. ಆದರೆ, 'ಬರಲು ಸಮಯವಿಲ್ಲ' ಎಂಬ ನಿಷ್ಠುರದ ಉತ್ತರ ಮಕ್ಕಳಿಂದ ಬಂದಿತ್ತು.
ಮಂಗಳವಾರ ಮುಂಜಾನೆ ಶಿವಚರಣ್ ಅವರು ಕೊನೆಯುಸಿರೆಳೆದಾಗಲೂ ಮಕ್ಕಳ ಮನಸ್ಸು ಕರಗಲಿಲ್ಲ.
ನೇಪಾಳದಲ್ಲಿದ್ದ ಹಿರಿಯ ಮಗಳು ಅನಿತಾ, ತಂದೆಯ ಅಂತಿಮ ಸಂಸ್ಕಾರಕ್ಕೆ ನೇರವಾಗಿ ಬರುವ ಬದಲು ಆನ್‌ಲೈನ್ ಮೂಲಕ ₹5,100 ಕಳುಹಿಸಿ, "ಕಾರ್ಯ ಪೂರ್ಣಗೊಳಿಸಿ" ಎಂದು ಜವಾಬ್ದಾರಿಯಿಂದ ನುಣುಚಿಕೊಂಡರು.
ಉತ್ತರ ಪ್ರದೇಶದ ಅಜಂಘಡ್‌ನಲ್ಲಿರುವ ನಿಶಾ ಮತ್ತು ಮುಂಬೈನಲ್ಲಿರುವ ಪ್ರಿಯಾ ಕೂಡ ಬರಲು ಸಾಧ್ಯವಿಲ್ಲವೆಂದು ಕೈತೊಳೆದುಕೊಂಡರು.
"ಬೇಗ ಕಾರ್ಯ ಮುಗಿಸಿ"
ಕೊನೆಗೆ ವೃದ್ಧಾಶ್ರಮದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಉದಾರ ಮನಸ್ಸಿನ ನಿವಾಸಿಗಳೇ ಮುಂದೆ ನಿಂತು ಅಂತಿಮ ಸಂಸ್ಕಾರ ನೆರವೇರಿಸಿದರು. ಅತ್ಯಂತ ಭೀಕರ ಮತ್ತು ಮನಕಲಕುವ ಸಂಗತಿಯೆಂದರೆ, ತಂದೆಯ ಅಂತ್ಯಕ್ರಿಯೆಯನ್ನು ಮಕ್ಕಳು ಸ್ಮಾರ್ಟ್‌ಫೋನ್‌ನ ವಿಡಿಯೋ ಕಾಲ್ ಮೂಲಕ ವೀಕ್ಷಿಸಿದರು!
ಅದಕ್ಕಿಂತಲೂ ಕರುಳು ಹಿಂಡುವ ವಿಷಯವೆಂದರೆ, ವಿಡಿಯೋ ಕರೆಯಲ್ಲಿದ್ದ ಮಗಳೊಬ್ಬಳು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದ ಸಿಬ್ಬಂದಿಗೆ "ಬೇಗ ಕಾರ್ಯ ಮುಗಿಸಿ" ಎಂದು ಆತುರ ಪಡಿಸಿದ್ದು. ಜನ್ಮ ನೀಡಿದ ತಂದೆಯ ಕಳೇಬರ ಉರಿಯುತ್ತಿರುವಾಗಲೂ, ಕನಿಷ್ಠ ಕಣ್ಣೀರ ಹನಿಯನ್ನೂ ಸುರಿಸದೆ 'ಸಮಯದ ಅಭಾವ'ದ ನೆಪ ಹೇಳಿದ ಮಕ್ಕಳ ನಡವಳಿಕೆ ಆಶ್ರಮದ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿತು.
ಉಟ್ಟು ತೊಡುವ ಬಟ್ಟೆಯಿಂದ ಹಿಡಿದು, ಉನ್ನತ ಶಿಕ್ಷಣದವರೆಗೆ ಪ್ರತಿಯೊಂದನ್ನೂ ಹಂಬಲಿಸಿ ನೀಡಿದ ತಂದೆಗೆ, ಅಂತಿಮವಾಗಿ ಮಕ್ಕಳು ನೀಡಿದ ಉಡುಗೊರೆ "ಒಂದು ವಿಡಿಯೋ ಕಾಲ್ ಮತ್ತು ₹5,100 ಹಣ!"
ಸ್ವಾರ್ಥದ ಕಾಳ್ಗಿಚ್ಚಿನಲ್ಲಿ ಕರುಳಿನ ಕುಡಿಗಳ ಪ್ರೀತಿ, ಕೃತಜ್ಞತೆ ಮತ್ತು ಮಾನವೀಯ ಮೌಲ್ಯಗಳು ಬೂದಿಯಾಗಿವೆ ಎಂಬುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ. ತಂತ್ರಜ್ಞಾನ ಬೆಳೆದಂತೆ ಮಾನವನ ಬುದ್ಧಿ ಬೆಳೆಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಮಾನವೀಯ ಸಂಬಂಧಗಳು ಮತ್ತು ನೈತಿಕ ಮೌಲ್ಯಗಳು ಸಂಪೂರ್ಣವಾಗಿ ಸತ್ತುಹೋಗಿವೆ ಎಂಬುದನ್ನು ಈ ದುರಂತ ಸಾರುತ್ತಿದೆ.
