ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಕ್ಷೇತ್ರದಲ್ಲೇ ಬಿಜೆಪಿಗೆ ಸೋಲು - ಬಿಜೆಪಿ ಎದುರು ಸ್ಪರ್ಧಿಸಿ ಗೆಲುವಿನ ನಗೆ ಬೀರಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

 

ಪ್ರಶಾಂತ್ ಕಿಶೋರ್

ಪಾಟ್ನಾ: ನಿತಿನ್ ನಬೀನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು,ಜನ್ ಸುರಾಜ್‌ ಪಕ್ಷದ (Jan Suraaj Party) ಸಂಸ್ಥಾಪಕ ಪ್ರಶಾಂತ್ ಕಿಶೋರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಭದ್ರ ಕೋಟೆಯಲ್ಲಿ ಆಡಳಿತಾರೂಢ ಬಿಜೆಪಿ ಚುನಾವಣಾ ತಂತ್ರಜ್ಞನ ಎದುರು ಆಘಾತಕಾರಿ ಸೋಲು ಅನುಭವಿಸಿದೆ.

ಪ್ರಶಾಂತ್ ಕಿಶೋರ್ ಅವರು 64,151 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ವಿರುದ್ಧ 18,953 ಮತಗಳ ಅಂತರದ ಜಯ ಸಾಧಿಸಿದ್ದಾರೆ. ಆರ್ ಜೆಡಿ ಅಭ್ಯರ್ಥಿ ರೇಖಾ ಕುಮಾರಿ ಗುಪ್ತಾ 14,273 ಮತಗಳನ್ನು ಗಳಿಸಿದರು.ಕ್ಷೇತ್ರವನ್ನು ಬಿಜೆಪಿ ಮತ್ತು ಪ್ರಶಾಂತ್ ಕಿಶೋರ್ ಅವರ ಪಕ್ಷವೂ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದವು.

2025 ರ ಸಾರ್ವತ್ರಿಕ ಚುನಾವಣೆಯಲ್ಲಿ ನಿತಿನ್ ನಬಿನ್ ಅವರು ಆರ್ ಜೆಡಿ ಅಭ್ಯರ್ಥಿ ಎದುರು ರೇಖಾ ಕುಮಾರಿ ಗುಪ್ತಾ ಎದುರು 51,936 ಮತಗಳ ಅಂತರದ ಭಾರೀ ಜಯ ಸಾಧಿಸಿದ್ದರು. ಇದು ನಬಿನ್ ಅವರ ಸತತ ನಾಲ್ಕನೇ ಜಯವಾಗಿತ್ತು.

2025 ರ ಸಾರ್ವತ್ರಿಕ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷ ಸ್ಪರ್ಧಿಸಿದ್ದರೂ ಪ್ರಶಾಂತ್ ಕಿಶೋರ್ ಅವರು ಕಣಕ್ಕಿಳಿದಿರಲಿಲ್ಲ. ಇದೀಗ ಅಖಾಡಕ್ಕೆ ಇಳಿದ ಮೊದಲ ಚುನಾವಣೆಯಲ್ಲೇ ವಿಧಾನಸಭೆ ಪ್ರವೇಶಿಸುವಲ್ಲಿ ಪ್ರಶಾಂತ್ ಕಿಶೋ‌ರ್ ಯಶಸ್ವಿಯಾಗಿದ್ದಾರೆ.