ಮೀಲಾದ್‌ ರಜೆ ಆಗಸ್ಟ್‌ 25ಕ್ಕೆ ಬದಲಿಸಲು ಮನವಿ: ಜಿಲ್ಲಾಡಳಿತಕ್ಕೆ ನಿಯೋಗದಿಂದ ಒತ್ತಾಯ

 


ಉಡುಪಿ: ಮೀಲಾದುನ್ನೆಬಿ ಆಚರಣೆಯ ಪ್ರಯುಕ್ತ ರಾಜ್ಯ ಸರ್ಕಾರ ಘೋಷಿಸಿರುವ ಆಗಸ್ಟ್‌ 26ರ ಸಾರ್ವತ್ರಿಕ ರಜೆಯನ್ನು ಆಗಸ್ಟ್‌ 25ಕ್ಕೆ ಬದಲಾಯಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಇಸ್ಲಾಮೀ ಚಂದ್ರದರ್ಶನದಲ್ಲಿ ಉಂಟಾದ ವ್ಯತ್ಯಾಸದ ಹಿನ್ನೆಲೆಯಲ್ಲಿ ಮೀಲಾದುನ್ನೆಬಿ ಆಚರಣೆಯನ್ನು ಆಗಸ್ಟ್‌ 25ರಂದು, ಮಂಗಳವಾರ ಆಚರಿಸುವಂತೆ ಜಿಲ್ಲೆಯ ಖಾಝಿಗಳು ಘೋಷಿಸಿದ್ದಾರೆ. ಹೀಗಾಗಿ ಸರ್ಕಾರ ಈಗಾಗಲೇ ಆಗಸ್ಟ್‌ 26ರಂದು ನಿಗದಿಪಡಿಸಿರುವ ಮೀಲಾದ್‌ ರಜೆಯನ್ನು ಆಗಸ್ಟ್‌ 25ಕ್ಕೆ ಪರಿಷ್ಕರಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ಉಡುಪಿ ಜಿಲ್ಲಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್ ಅವರಿಗೆ ನಿಯೋಗವು ಮನವಿ ಸಲ್ಲಿಸಿ ಮೀಲಾದ್‌ ಆಚರಣೆಯ ದಿನಾಂಕ ಹಾಗೂ ಸರ್ಕಾರಿ ರಜೆಯ ದಿನಾಂಕದಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಜಿಲ್ಲಾ ವಕ್ಫ್‌ ಸಲಹಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಿ.ಎಚ್. ಅಬ್ದುಲ್ ಮುತ್ತಲಿ ವಂಡ್ಸೆ ಅವರ ನೇತೃತ್ವದಲ್ಲಿ ನಿಯೋಗ ತೆರಳಿತ್ತು. ನಿಯೋಗದಲ್ಲಿ ಸಮಿತಿಯ ಮಾಜಿ ಉಪಾಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್‌ ರಝ್ವಿ ಕಲ್ಕಟ್ಟ, ಮಾಜಿ ಸದಸ್ಯ ಮನ್ಸೂರ್‌ ಮರವಂತೆ ಹಾಗೂ ಜಿ.ಎಂ. ಸತ್ತಾರ್‌ ಗಂಗೊಳ್ಳಿ ಉಪಸ್ಥಿತರಿದ್ದರು.