ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ 200 ರೂ ಇಳಿಕೆ: ಗೃಹ ಬಳಕೆ ಎಲ್​ಪಿಜಿ ದರದಲ್ಲಿ ಬದಲಾವಣೆ ಇಲ್ಲ

 


ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿ ಕೇಂದ್ರ ಸರ್ಕಾರ ಇಂದು ಪ್ರಕಟಿಸಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂ.ಗಳಿಗೂ ಹೆಚ್ಚು ಕಡಿತಗೊಳಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.


ದರ ಏರಿಕೆ ಬಳಿಕ ಎರಡನೇ ಬಾರಿಗೆ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಿರುವುದು ಬಳಕೆದಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪರಿಷ್ಕೃತ ಬೆಲೆಗಳು ತಕ್ಷಣದಿಂದಲೇ ಜಾರಿಗೆ ಬಂದಿದೆ.


ನೂತನ ದರ ಪರಿಷ್ಕರಣೆಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 202 ರೂ. ಮತ್ತು ಕೋಲ್ಕತ್ತಾದಲ್ಲಿ 209 ರೂ. ಇಳಿಕೆಯಾಗಿದೆ. ಪರಿಣಾಮ ಕೋಲ್ಕತ್ತಾದಲ್ಲಿ ಒಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2,872.50 ರೂ.ಗೆ ಇಳಿಕೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಿಂದ ಹೋಟೆಲ್ ಉದ್ಯಮಕ್ಕೆ ಪುಷ್ಠಿ: ದರ ಇಳಿಕೆಯು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ಉದ್ಯಮಗಳು ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಮನೆಗಳಿಗೆ ಸರಬರಾಜು ಮಾಡುವ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅಮೆರಿಕ-ಇರಾನ್ ಯುದ್ಧ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕ ಎಲ್‌ಪಿಜಿ ಬೆಲೆಗಳು ಮೇ ಮತ್ತು ಜೂನ್‌ನಲ್ಲಿ ತೀವ್ರ ಏರಿಕೆ ಕಂಡಿದ್ದವು. ಬಳಿಕ ಜುಲೈ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ದರ ಕಡಿಮೆ ಮಾಡಿದ್ದವು. ಇದಕ್ಕೆ ಎರಡನೇ ಬಾರಿ ದರ ಇಳಿಕೆ ಮಾಡಿವೆ.