ಯುವಕರ ತಂಡದಿಂದ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದಿಂದ ದ್ವಾದಶ ಜ್ಯೋತಿರ್ಲಿಂಗ ಮಹಾಯಾತ್ರೆ

 


ಉಡುಪಿ: ಮಂಗಳೂರಿನ ನಿತಿನ್ ಪೂಜಾರಿ, ರಿತೇಶ್ ಪೂಜಾರಿ, ಅಜಯ್ ಮೊಯ್ಲಿ ಹಾಗೂ ಬಸಂತ್ ಕುಮಾರ್ ಕುತ್ಯಾರ್ ನ್ನೊಳಗೊಂಡ ಯುವಕರ ತಂಡವು ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದಿಂದ, ಸುಮಾರು 45–50 ದಿನಗಳ ಪವಿತ್ರ ದ್ವಾದಶ ಜ್ಯೋತಿರ್ಲಿಂಗ ಮಹಾಯಾತ್ರೆಯನ್ನು ಆರಂಭಿಸುತ್ತಿದ್ದಾರೆ.

ಈ ಯಾತ್ರೆಯ ಉದ್ದೇಶ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಜೊತೆಗೆ ಸನಾತನ ಧರ್ಮದ ಶ್ರೇಷ್ಠತೆ, ಶಿವಭಕ್ತಿ, ತುಳುನಾಡಿನ ಆಧ್ಯಾತ್ಮಿಕ ಪರಂಪರೆ ಹಾಗೂ ಶ್ರೀ ತುಳುವೇಶ್ವರ–ತುಳುವೇಶ್ವರಿ ಸಾನಿಧ್ಯದ ಮಹತ್ವವನ್ನು ದೇಶದಾದ್ಯಂತ ಪರಿಚಯಿಸುವುದಾಗಿದೆ.



ಈ ಯಾತ್ರೆಯಲ್ಲಿ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿ, ಭಾಷೆಗಳು, ಪವಿತ್ರ ಶಿವಕ್ಷೇತ್ರಗಳು, ದ್ವಾದಶ ಜ್ಯೋತಿರ್ಲಿಂಗಗಳು ಹಾಗೂ ಪವಿತ್ರ ನದಿಗಳ ಇತಿಹಾಸವನ್ನು ದಾಖಲಿಸಿ, ಭಕ್ತರಿಗೆ ಉಪಯುಕ್ತವಾಗುವ ಟ್ರಾವೆಲ್ ಗೈಡ್ ವಿಡಿಯೋಗಳನ್ನು ಸಿದ್ಧಪಡಿಸಲಾಗುವುದು. ಜೊತೆಗೆ ಶೂನ್ಯ ತ್ಯಾಜ್ಯ (Zero Waste) ಪರಿಕಲ್ಪನೆಯಡಿ ತೀರ್ಥಕ್ಷೇತ್ರಗಳ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸನಾತನ ಧರ್ಮದ ಜೀವನಮೌಲ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.