ಮಹಿಳೆಯರ ಮೇಲಿನ ಹಿಂಸಾಚಾರಕ್ಕೆ ಅಂತ್ಯ ಹಾಡಿ – ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ - ಶಮೀಮಾ ತುಂಬೆ


 

ಮಹಿಳೆಯರ ಮೇಲಿನ ಹಿಂಸಾಚಾರ, ಕಿರುಕುಳ ಹಾಗೂ ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆ ಇಡೀ ಸಮಾಜದ ಮನಸ್ಸನ್ನು ಬೆಚ್ಚಿಬೀಳಿಸಿದ್ದು, ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಮಹಿಳೆಯರನ್ನು ಹಿಂಬಾಲಿಸುವುದು, ಬೆದರಿಸುವುದು, ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುವುದು ಹಾಗೂ ನಿರಾಕರಿಸಿದಾಗ ಹಿಂಸೆಗೆ ಮತ್ತು ಹತ್ಯೆಗೆ ಮುಂದಾಗುವ ಮನೋವಿಕೃತಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಇಂತಹ ಅಪರಾಧಗಳ ವಿರುದ್ಧ ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳು ಯಾವುದೇ ರಾಜಿ ಮಾಡಿಕೊಳ್ಳದೆ ತ್ವರಿತ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

ಮಹಿಳೆಯರ ಸುರಕ್ಷತೆಯನ್ನು ಸರ್ಕಾರ ತನ್ನ ಮೊದಲ ಆದ್ಯತೆಯಾಗಿ ಪರಿಗಣಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಬಂಟ್ವಾಳ ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಿ, ಇಂತಹ ಕೃತ್ಯಗಳಿಗೆ ಯಾರೂ ಮುಂದಾಗದಂತೆ ಸ್ಪಷ್ಟ ಸಂದೇಶ ನೀಡಬೇಕಾಗಿದೆ.

ಈ ಮೂಲಕ ಮೃತ ಮಹಿಳೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಹಾಗೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ನ್ಯಾಯ ಒದಗಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್, ಮಂಗಳೂರು ನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


ಶಮೀಮಾ ತುಂಬೆ

ಪ್ರಧಾನ ಕಾರ್ಯದರ್ಶಿ

ವಿಮೆನ್ ಇಂಡಿಯಾ ಮೂವ್ಮೆಂಟ್

ಮಂಗಳೂರು ನಗರ ಜಿಲ್ಲೆ